ಮೇ.20ರಿಂದ ಬೆಟಗೇರಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ
*ಸಾಮೂಹಿಕ ವಿವಾಹ * ದಾನಿಗಳಿಗೆ ಸತ್ಕಾರ * ವಿವಿಧ ಶರ್ತುಗಳ ಆಯೋಜನೆ
ಬೆಟಗೇರಿ:ಗ್ರಾಮದ ಬೀರಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹ ಮತ್ತು ದಾನಿಗಳಿಗೆ ಸತ್ಕಾರ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ.20ರಿಂದ ಮೇ.22ರವರೆಗೆ ನಡೆಯಲಿದೆ.
ಮೇ.20ರಂದು ಬೆಳಗ್ಗೆ 6 ಗಂಟೆಗೆ ಬೀರಸಿದ್ದೇಶ್ವರ ದೇವರ ಗದ್ದುಗೆಗೆ ಪೂಜೆ, ಅಭಿಷೇಕ ಬಳಿಕ ಸಾಯಂಕಾಲ 5 ಗಂಟೆಗೆ ಪುರದೇವರ ಹಾಗೂ ಪರಸ್ಥಳದ ವಿವಿಧ ದೇವರ ವಾಲಗ ಕೂಡುವವು, ಮಮದಾಪುರದ ಬೀರಸಿದ್ದೇಶ್ವರ, ಗೋಸಬಾಳ ಬೀರಸಿದ್ಧೇಶ್ವರ, ಮುಗಳಿಹಾಳದ ಮಾಳಿಂಗರಾಯ ದೇವರ ಪಲ್ಲಕ್ಕಿ ಬರಮಾಡಿಕೊಳ್ಳುವದು, ಜಾತ್ರಾಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ21ರಂದು ಬೆಳಗ್ಗೆ 6 ಗಂಟೆಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಮಹಾಪೂಜೆ, ವiಹಾಭಿಷೇಕ, ಮುಂಜಾನೆ 8 ಗಂಟೆಗೆ ಪಲ್ಲಕ್ಕಿ ಉತ್ಸವ, ಮುಂಜಾನೆ11:36 ಗಂಟೆಗೆ ಸಾಮೂಹಿಕ ವಿವಾಹ, ದಾನಿಗಳಿಗೆ ಸತ್ಕಾರ ಸಮಾರಂಭ ಬಳಿಕ ಮಹಾಪ್ರಸಾದ ಜರುಗಲಿದೆ.
ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಮಮದಾಪೂರದ ಮೌನ ಮಲ್ಲಿಕಾರ್ಜುನ ಸ್ವಾಮಿಜಿ ದಿವ್ಯ ಸಾನಿಧ್ಯ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಮಾರಂಭ ಉದ್ಘಾಟಿಸಲಿದ್ದು, ಕೌಜಲಗಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಅಧ್ಯಕ್ಷತೆ, ತಾಪಂ ಮಾಜಿ ಸದಸ್ಯ ಬಸವಂತ ಕೋಣಿ, ಗ್ರಾಪಂ ಅಧ್ಯಕ್ಷೆ ಸಾಂವಕ್ಕ ಬಾಣಸಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮ ಪಂಚಾಯತಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಗಣ್ಯರು, ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಂದ ಅನ್ನಸಂತರ್ಪನೆ ನಡೆದು, ಮಧ್ಯಾಹ್ನ 12 ಗಂಟೆಗೆ ಹಾಲಲ್ಲಿ, ಎರಡು ಹಲ್ಲಿನ, ನಾಲ್ಕು ಹಲ್ಲಿನ, ಓಪನ್ ಟಗರಿನ ಕಾಳಗ ಸ್ಪರ್ಧೆ, 20ಕೆ.ಜಿ.ಕಲ್ಲು ಎತ್ತಿ ಗ್ರೌಂಡ ಸುತ್ತು ಹಾಯುವ ಸ್ಪರ್ಧೆ ನಡೆದ ಬಳಿಕ ವಿಜೇತರಾದವರಿಗೆ ನಗದು ಬಹುಮಾನ, ಪ್ರಶಸ್ತಿ ವಿತರಣೆ ಜರುಗಲಿದೆ. ರಾತ್ರಿ 10 ಗಂಟೆಗೆ ಅಥಣಿ ತಾಲೂಕಿನ ಹರ್ತನಾಳ ಮಾಳಿಂಗೇಶ್ವರ ಗಾಯನ ಸಂಘ ಹಾಗೂ ಕಾಮರ್ತಿ ಅಮೋಘಸಿದ್ಧೇಶ್ವರ ಗಾಯನ ಸಂಘದವರಿಂದ ಡೊಳ್ಳಿನ ಪದಗಳ ಗಾಯನ ಜರುಗಲಿದೆ.
ಮೇ.22ರಂದು ಮುಂಜಾನೆ 8 ಗಂಟಗೆ ಬೀರಸಿದ್ದೇಶ್ವರ ದೇವರ ಗದ್ದುಗೆ ಪೂಜೆ, ಅಭಿಷೇಕ, ಭಂಢಾರ ಒಡೆಯುವ ಕಾರ್ಯಕ್ರಮದ ಬಳಿಕ ಜಾತ್ರಾ ಮಹೋತ್ಸವ ಸಮಾರೊಪಗೊಳ್ಳಲಿದೆ. ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವವರು ಮೊ.ನಂ. 7259149248, 9663909695 ಗೆ ಸಂಪರ್ಕಿಸಬೇಕೆಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಷ ಕರೆಣ್ಣವರ, ಉಪಾಧ್ಯಕ್ಷ ಮಾಯಪ್ಪ ಬಾಣಸಿ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.