ಬೆಟಗೇರಿ ಗ್ರಾಮ ಬೇಗ ಮಾದರಿ ಗ್ರಾಮವಾಗಲಿ: ಈರಯ್ಯ ಹಿರೇಮಠ
ಬೆಟಗೇರಿ:ಸ್ಥಳೀಯ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಬೆಟಗೇರಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಇಲ್ಲಿಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಯವರ ಜೋತೆಗೆ ಸ್ಥಳೀಯರ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೇದಮೂರ್ತಿ ಈರಯ್ಯ ಹಿರೇಮಠ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಸೆ.22 ರಂದು ನಡೆದ ಬೆಟಗೇರಿ ಗ್ರಾಮ ಪಂಚಾಯತಿ ಕಛೇರಿ ಕಟ್ಟಡದ ಮೇಲೆ ಸನ್ 2023-24ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸುಮಾರು 17.50000/-ರೂ.(ಹದಿನೇಳು ಲಕ್ಷ ಐವತ್ತು ಸಾವಿರ ರೂಪಾಯಿ)ಗಳ ಅನುದಾನದಡಿಯಲ್ಲಿ ಸಂಜೀವಿನಿ ಶೆಡ್ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ವಿವಿಧ ಯೋಜನೆಗಳ ಮೂಲಕ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡು ಬೆಟಗೇರಿ ಗ್ರಾಮ ಬೇಗ ಮಾದರಿ ಗ್ರಾಮವಾಗಲಿ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಮತ್ತು ಮಾರ್ಗದರ್ಶದಲ್ಲಿ ಈಗಾಗಲೇ ಬೆಟಗೇರಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸ್ಥಳೀಯರ ಅಗತ್ಯ ಸೌಲಭ್ಯಗಳನ್ನು ಸಕಾಲಕ್ಕೆ ಕಲ್ಪಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ವೇದಮೂರ್ತಿ ಈರಯ್ಯ ಹಿರೇಮಠ ತಿಳಿಸಿದರು.
ಸುರೇಶ ವಡೇರ ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು. ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಗುದ್ದಲಿ ಪೂಜೆ ನೆರವೇರಿಸಿದರು. ಸುಭಾಷ ಜಂಬಗಿ, ರಾಮಣ್ಣ ನೀಲಣ್ಣವರ, ಸುರೇಶ ಬಾಣಸಿ, ವಿಠಲ ಚಂದರಗಿ, ಮಂಜು ಕಂಬಿ, ಶಿವಾನಂದ ಐದುಡ್ಡಿ, ಈರಪ್ಪ ದಂಡಿನ, ಗ್ರಾಮ ಪಂಚಾಯ್ತಿ ಸದಸ್ಯರು, ಸಿಬ್ಬಂದಿ, ಸ್ಥಳೀಯರು, ಇತರರು ಇದ್ದರು.