ಬೆಟಗೇರಿ ಗ್ರಾಮದ ಯೋಗಪಟು ಪುಂಡಲೀಕ ಲಕಾಟಿಗೆ ರಾಜ್ಯಮಟ್ಟದ ಪ್ರಶಸ್ತಿ
ವರದಿ*ಅಡಿವೇಶ ಮುಧೋಳ. ಬೆಟಗೇರಿ
ಕುಂದಾನಗರಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯೋಗ ಸಾಧಕ ಯುವಪ್ರತಿಭೆ ಪುಂಡಲೀಕ ಮಹಾದೇವಪ್ಪ ಲಕಾಟಿ ಅವರು ಯೋಗಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಮತ್ತು ಸಾಧನೆ ಪರಿಗಣಿಸಿ ರಾಜ್ಯ ಮಟ್ಟದ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ವಿಜಯಪುರ ಜಿಲ್ಲೆಯ ಉತ್ನಾಳದ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆ, ಅಖಿಲ ಕರ್ನಾಟಕ ಪಂಚಮಸಾಲಿ ಪರಿಷತ್ತು, ಅಖಿಲ ಭಾರತೀಯ ಪಂಚಮಸಾಲಿ ಪರಿಷತ್ತು ಮತ್ತು ಮಲ್ಲಸರ್ಜ ದೇಸಾಯಿ ಅಂತರಾಷ್ಟ್ರೀಯ ಕ್ರೀಡಾ ತರಬೇತಿ ಕೇಂದ್ರ, ಬೆಳವಡಿ ಮಲ್ಲಮ್ಮ ದೈಹಿಕ ಮತ್ತು ಸೈನಿಕರ ತರಬೇತಿ ಕೇಂದ್ರದ ಸಹಯೋಗದಲ್ಲಿ ವಿಜಯಪುರ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಆಶ್ರಮದಲ್ಲಿ ಅ.23ರಂದು ನಡೆದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಬೆಟಗೇರಿ ಗ್ರಾಮದ ಯುವಕ ಪುಂಡಲೀಕ ಮಹಾದೇವಪ್ಪ ಲಕಾಟಿ ಅವರಿಗೆ ರಾಜ್ಯಮಟ್ಟದ ಕೆಳದಿ ರಾಣ Âಚೆನ್ನಮ್ಮ ಪ್ರಶಸ್ತಿ ನೀಡಿದ್ದಾರೆ.
ಈಗ ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವಿಭಾಗದಲ್ಲಿ ಜಿಲ್ಲಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಯೋಗಪಟು ಪುಂಡಲೀಕ ಲಕಾಟಿ ಕಳೆದ ಹತ್ತು ವರ್ಷದಿಂದ ವಿವಿಧ ಯೋಗಾಸನಗಳ ಅಭ್ಯಾಸ ಮಾಡುತ್ತಾ, ಅಂತರಾಷ್ಟ್ರೀಯ ಮತ್ತು ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿವಿಧಡೆ ಆಯೋಜಿಸಿದ ಹಲವು ಯೋಗಸ್ಪರ್ಧೆಯಲ್ಲಿ ಭಾಗವಹಿಸಿ, ಅಂತರಾಷ್ಟ್ರೀಯ ಮತ್ತು ರಾಷ್ಟ್ರ ಹಾಗೂ ರಾಜ್ಯಮಟ್ಟದ ಯೋಗಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಹಲವು ಪ್ರಶಸ್ತಿ, ಪ್ರಮಾಣಪತ್ರ ತನ್ನ ಮುಡಿಗೇರಿಸಿಕೊಂಡಿದ್ದಾರೆ.
ದೇಶದ, ರಾಜ್ಯ, ಕುಂದಾನಗರಿ ಬೆಳಗಾವಿ ಜಿಲ್ಲೆ, ಕರದಂಟೂರು ಗೋಕಾಕ ಹಾಗೂ ಹುಟ್ಟೂರು ಬೆಟಗೇರಿ ಗ್ರಾಮದ ಕೀರ್ತಿಯನ್ನು ಯೋಗಪಟು ಪುಂಡಲೀಕ ಲಕಾಟಿ ಹೆಚ್ಚಿಸಿದ್ದಾರೆ. ಈಗ ಕೆಳದಿ ರಾಣಿ ಚೆನ್ನಮ್ಮ ರಾಜ್ಯಮಟ್ಟದ ಯೋಗ ಪ್ರಶಸ್ತಿ ಪಡೆದ ಸ್ಥಳೀಯ ಯೋಗಪಟು ಪುಂಡಲೀಕ ಲಕಾಟಿ ಅವರ ಸಾಧನೆಯನ್ನು ಬೆಟಗೇರಿ ಹಾಗೂ ಗೋಕಾಕ ತಾಲೂಕಿನ ಹಿರಿಯ ನಾಗರಿಕರು, ಗಣ್ಯರು, ಸ್ಥಳೀಯರು ಶ್ಲಾಘಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.