ಪ್ರತಿಯೊಬ್ಬರು ಶೌಚಾಲಯ ಬಳಕೆ ಮಾಡಿ: ವಿನಯಕುಮಾರ ನಾಯ್ಡು
ಬೆಟಗೇರಿ: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆ-ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರು ಶೌಚಾಲಯ ಬಳಕೆ ಮಾಡಿರಿ ಎಂದು ಗೋಕಾಕ ತಾಲೂಕ ಪಂಚಾಯತ ಎಡಿ ವಿನಯಕುಮಾರ ನಾಯ್ಡು ಹೇಳಿದರು.
ಬೆಳಗಾವಿ ಜಿಲ್ಲಾ ಪಂಚಾಯತ, ಗೋಕಾಕ ತಾಲೂಕ ಪಂಚಾಯತ ಹಾಗೂ ಬೆಟಗೇರಿ ಗ್ರಾಮ ಪಂಚಾಯತ ಸಹಯೋಗದಲ್ಲಿ ನಡೆದ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹನಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶೌಚಾಲಯ ಬಳಕೆ ಬಗ್ಗೆ ವಿದೇಶಕ್ಕೆ ಹೋಲಿಸಿದರೆ ನಮ್ಮ ದೇಶದ ಹಳ್ಳಿಗಳಲ್ಲಿ ಶೌಚಾಲಯ ಬಳಕೆ ಪ್ರಮಾಣ ಕಡಿಮೆ ಇದೆ. ಗ್ರಾಮೀಣ ವಲಯದಲ್ಲಿ ಶೌಚಾಲಯ ಬಳಕೆ ಪ್ರಮಾಣ ಹೆಚ್ಚಾಗಲು ಮತ್ತು ಬಯಲು ಶೌಚ ಮುಕ್ತಿ ಜಾಗೃತಿ ಮೂಡಿಸಲು ಸ್ಥಳೀಯ ಪ್ರಜ್ಞಾವಂತ ಯುವಕರು ಪ್ರಯತ್ನಿಸಬೇಕು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಅಧ್ಯಕ್ಷತೆ ವಹಿಸಿದ್ದರು. ಗೋಕಾಕ ತಾಲೂಕ ಪಂಚಾಯತ ಇಓ ಪರಶುರಾಮ ಘಸ್ತೆ, ಸ್ಥಳೀಯ ವಿವಿಡಿ ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮುಖ್ಯತಿಥಿಗಳಾಗಿ ವಿಶ್ವ ಶೌಚಾಲಯ ದಿನ ಮತ್ತು ಶೌಚಾಲಯ ಬಳಕೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಟಗೇರಿ ಗ್ರಾಪಂ ಪಿಡಿಒ ಎಚ್.ಎನ್.ಬಾವಿಕಟ್ಟಿ, ರಮೇಶ ನೀಲಣ್ಣವರ, ರಶ್ಮಿ ಹುಂಡೆಕಾರ, ಬಸವರಾಜ ಪಣದಿ, ಸುರೇಶ ಬಾಣಸಿ, ವಿಠಲ ಚಂದರಗಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾಮದ ವಿವಿಧ ಶಾಲೆಯ ಮುಖ್ಯೋಪಾಧ್ಯಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಸ್ಥಳೀಯರು ಇದ್ದರು.