ಗಮನ ಸೆಳೆದ ಬೆಟಗೇರಿ ಬಸವ ನಗರ ತೋಟದ ಕನ್ನಡ ಶಾಲಾ ಮಕ್ಕಳ ಸಂತೆ..!
ವರದಿ:ಅಡಿವೇಶ ಮುಧೋಳ.
ಬೆಟಗೇರಿ:ತಾಜಾ ತಾಜಾ ಬೆಂಡೆಕಾಯಿ, ಬದನೆಕಾಯಿ, ಸೌತೆಕಾಯಿ, ಹಸಿ ಮೆಣಸಿನಕಾಯಿ, ತಪ್ಪಲ ಪಲ್ಯೆ…ತಗೊಳ್ಳಿ… ತಗೊಳ್ಳಿ… ಎಂದು ಕೂಗುವ ಶಾಲಾ ಮಕ್ಕಳು, ಚೌಕಾಶಿ ಮಾಡುವ ಗ್ರಾಹಕರು… ಇದೇನು.! ಎಲ್ಲಿ ಅನ್ನುತ್ತಿರಾ.? ಇದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವ ನಗರ ತೋಟದ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗಾಗಿ ಡಿ.20ರಂದು ಆಯೋಜಿಸಿದ ಮಕ್ಕಳ ಸಂತೆಯಲ್ಲಿ ಕಂಡು ಬಂದ ದೃಶ್ಯವಿದು.
ಈ ಶಾಲಾ ವಿದ್ಯಾರ್ಥಿಗಳ ಸಂತೆಯಲ್ಲಿ ಈರುಳ್ಳಿ, ಬದನೆ, ಚವಳಿ, ಬೆಂಡೆ, ಸೌತೆಕಾಯಿ, ಬಟಾಟೆ, ಗಜ್ಜರಿ, ನುಗ್ಗಿಕಾಯಿ, ಕರಿಬೇವು, ಕೂತಬಂರಿ ಸೇರಿದಂತೆ ವಿವಿಧ ತಿಂಡಿ-ತಿನಸು, ತರ-ತರಹದ ಸೊಪ್ಪು ಏನುಂಟು ಏನಿಲ್ಲಾ… ವಿದ್ಯಾರ್ಥಿಗಳು ಸಂತೆಗೆ ಬಂದ ಗ್ರಾಹಕರನ್ನು ಸೆಳೆಯುವುದು, ಮನವರಿಕೆ ಮಾಡುವುದು, ಚೌಕಾಶಿ ಮಾಡುವುದು, ತಕ್ಕಡಿ ನಿರ್ವಹಣೆ, ಚಿಲ್ಲರೆ ಹಣದ ವಿನಿಮಯ, ಸ್ವಚ್ಛತೆಯ ಪರಿಕಲ್ಪನೆ ಬಗ್ಗೆ ಜಾಗೃತಿ ಮೂಡಿಸಿ, ತರಕಾರಿ ಒಯ್ಯಲು ಮಕ್ಕಳ ಸಂತೆಯಲ್ಲಿ ಮಾರಾಟ ಮನ ಮುಟ್ಟುವಂತಿತ್ತು.
ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ಥಳೀಯ ತರಕಾರಿ ಬೆಳೆಗಾರ ರೈತರಲ್ಲಿ, ಮಾರುಕಟ್ಟೆಗೆ ಹೋಗಿ, ಯಾರ್ಯಾರೂ ಎಂತಹ ತರಕಾರಿ ತರಬೇಕು ಅಂತಾ ತಾವೇ ನಿರ್ಧರಿಸಿ ತಂದಿದ್ದರು. ಅಲ್ಲದೇ ಶಾಲೆಯ ಆವರಣದ ನಿರ್ಧರಿತ ಜಾಗೆಯಲ್ಲಿ ತಮ್ಮ ತಮ್ಮ ತರಕಾರಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು ಸಂತೆಗೆ ಬಂದ ಗ್ರಾಹಕರಿಗೆ ಮಾರಿ, ನೋಡುಗರ, ತರಕಾರಿ ಕೊಂಡುಕೊಳ್ಳುವ ಗ್ರಾಹಕರ ಗಮನ ಸೆಳೆದರು.
ಪ್ರಾಥಮಿಕ ಶಿಕ್ಷಣದ ಕಲಿಕಾ ಹಂತದಲ್ಲಿರುವ ಮಕ್ಕಳಿಗೆ ವ್ಯಾಪಾರ, ವಾಣಿಜ್ಯ, ಮಾರುಕಟ್ಟೆ, ಮಾರಾಟ, ಬೆಲೆ ನಿಗದಿ, ಚೌಕಾಸಿ, ಸರಕು ಸಾಗಾಟ, ಹೂಡಿಕೆ, ಲಾಭ, ನಷ್ಟಗಳು ಸೇರಿದಂತೆ ವಿವಿಧ ವಿಷಯಗಳ ಸಮಗ್ರ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ನೀಡುವ ಉದ್ದೇಶದಿಂದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಗೌರಮ್ಮ ವಾರಿ ತಿಳಿಸಿದರು.
ಕೆಲವು ದಿನಗಳ ಮೊದಲೇ ಸಂತೆ ಆಯೋಜನೆಯ ಕುರಿತು ತಿಳಿಸಲಾಗಿತ್ತು. ಶಾಲಾ ಮಕ್ಕಳ ಪಾಲಕರು, ಸ್ಥಳೀಯರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಸೇರಿದಂತೆ ಶಾಲೆಯ ಸುಮಾರ 85 ಕ್ಕೂ ಹೆಚ್ಚು ಮಕ್ಕಳು, ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಈ ಸಂತೆಯಲ್ಲಿ ಪಾಲ್ಗೊಂಡು ತರಕಾರಿ ಸೇರಿದಂತೆ ವಿವಿಧ ವಸ್ತು, ತಿಂಡಿ ತಿನಸುಗಳನ್ನು ಖರೀದಿಸಿ, ಮುಗ್ಧ ಮಕ್ಕಳ ಸಂತೆಯಲ್ಲಿ ಖುಷಿಯಿಂದ ಸಂಭ್ರಮಿಸಿದರು.
ಶಾಲೆಯ ಶಿಕ್ಷಕ ಎಂ.ಎ.ಮದರಖಾನ, ಎಸ್‍ಡಿಎಮ್‍ಸಿ ಅಧ್ಯಕ್ಷ ಲವ ಪಾರ್ವತೇರ, ಅತಿಥಿ ಶಿಕ್ಷಕರು, ವಿದ್ಯಾರ್ಥಿ ಪಾಲಕರು, ಶಾಲಾ ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು.