ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು: ಎಂ.ಎಲ್.ಯಂಡ್ರಾವಿ
ಬೆಟಗೇರಿ:ಗ್ರಾಮೀಣ ವಲಯದಲ್ಲಿ ಗ್ರಾಮ ಪಂಚಾಯತಿಯ ಗ್ರಂಥಾಲಯ ಮತ್ತು ಅರಿವು ಕೇಂದ್ರಗಳು ಮಕ್ಕಳ ಕಲಿಕೆಗೆ ಆಶಾಕಿರಣವಿದ್ದಂತೆ, ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಪಿಡಿಒ ಎಂ.ಎಲ್.ಯಂಡ್ರಾವಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಗ್ರಂಥಾಲಯದ ಸಹಯೋಗದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಏ.24ರಂದು ನಡೆದ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜ್ಞಾನ ಸಂಪತ್ತಿಗಿಂತ ಇನ್ನೂಂದು ಸಂಪತ್ತಿಲ್ಲಾ, ನಾವು ಕಷ್ಟಪಟ್ಟು ಸಂಪಾದಿಸಿದ ಆಸ್ತಿ, ಅಂತಸ್ತು ನಶಿಸಿ ಹೋಗಬಹುದು, ಜ್ಞಾನ ಎಂದು ನಶಿಸಿ ಹೋಗುವುದಿಲ್ಲಾ, ವಿದ್ಯಾರ್ಥಿಗಳು ಶಾಲಾ ಬಿಡುವಿನ ವೇಳೆಯಲ್ಲಿ ಉತ್ತಮ ಪುಸ್ತಕಗಳು ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವ ಪುಸ್ತಕಗಳನ್ನು ಓದಬೇಕು ಎಂದು ಪಿಡಿಒ ಎಂ.ಎಲ್.ಯಂಡ್ರಾವಿ ಅಭಿಪ್ರಾಯಿಸಿದರು.
ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಪ್ರಾಸ್ತಾವಿಕವಾಗಿ ಮಾತನಾಡಿ, ಓದುವ ಬೆಳಕು ಕಾರ್ಯಕ್ರಮದ ವಿವಿಧ ವಿಷಯಗಳನ್ನು ಶಾಲಾ ಮಕ್ಕಳಿಗೆ ತಿಳಿಸಿದರು.
ರಾಮಣ್ಣ ನೀಲಣ್ಣವರ, ವೈ.ಸಿ.ಶೀಗಿಹಳ್ಳಿ, ಸಿದ್ಧೇಶ್ವರ ಕುರಬೇಟ, ವಿಶ್ವನಾಥ ಶೀಗಿಹಳ್ಳಿ, ತುಕಾರಾಮ ಕುರಿ, ಸುರೇಶ ಬಾಣಸಿ, ಈರಣ್ಣ ದಂಡಿನ, ಮಣಿಕಂಠ ಐದುಡ್ಡಿ, ಗ್ರಾಪಂ ಸಿಬ್ಬಂದಿ, ಗಣ್ಯರು, ಶಿಕ್ಷಣ ಪ್ರೇಮಿಗಳು, ಶಾಲಾ ಮಕ್ಕಳು ಇದ್ದರು.