ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ಶುಕ್ರವಾರ ಜು.18ರಂದು ವಾರದ ದಿನ ಮುಂಜಾನೆ 9:30 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಿತು.
ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ ಪೂಜೆ, ನೈವೇದ್ಯ ಸಮರ್ಪಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಸೇರಿದಂತೆ ವಿವಿಧ ಕಟ್ಟಾ ವಾರ ಆಚರಣೆಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿ, ಸ್ಥಳಗಳು ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿದ್ದವು.
ಬೆಟಗೇರಿ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಮುಂದೆ ಬರುವ ವಾರದ ಮಂಗಳವಾರ ಜು.22ರಂದು ಇನ್ನೂ 1 ಮಂಗಳವಾರ ದಿನವನ್ನು ಸಂಪ್ರದಾಯದಂತೆ ವಾರ ಹಿಡಿಯಲಾಗಿದೆ.
ಇನ್ನೂ 1 ಮಂಗಳವಾರ ಕಟ್ಟಾ ವಾರ ಆಚರಣೆ : ಸುತ್ತಲಿನ ಹತ್ತೂರು ಹಳ್ಳಿಗಳಿಗೆ ಬೆಟಗೇರಿ ಗ್ರಾಮ ವ್ಯಾಪಾರ ವಹಿವಾಟದ ವಾಣಿಜ್ಯ ಕೇಂದ್ರ ಸ್ಥಳವಾಗಿದ್ದರಿಂದ ಸ್ಥಳೀಯ ಹಾಗೂ ಸುತ್ತಲಿನ ಹತ್ತೂರಿನ ಸಾರ್ವಜನಿಕರ ಗಮಸಿಸಬೇಕು. ಇನ್ನೂ 1 ಮಂಗಳವಾರ ಜು.22ರ ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ.
ಬೆಟಗೇರಿ ಗ್ರಾಮದ ರೈತರ್ಯಾರೂ ವಾರದ ಇನ್ನೂ 1 ಮಂಗಳವಾರ ದಿನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ, ಊರಿನಲ್ಲಿರುವ ಆಸ್ಪತ್ರೆ, ಔಷಧ ಅಂಗಡಿ ಹೊರತುಪಡಿಸಿ, ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‍ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು ಎಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ.
ಸ್ಥಳೀಯ ವಿವಿಧ ದೇವರ ಅರ್ಚಕರು, ಹಿರಿಯ ನಾಗರಿಕರು, ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಸದಸ್ಯರು, ಸ್ಥಳೀಯರು ಇದ್ದರು.