ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕಳೆದ ಜು.1ರಿಂದ ನಾಲ್ಕು ಮಂಗಳವಾರ, ಒಂದು ಶುಕ್ರವಾರ ಸೇರಿ ವಾರ ಹಿಡಿದ ಹಿನ್ನಲೆಯಲ್ಲಿ ಕೊನೆಯ ಮಂಗಳವಾರ ಜುಲೈ.22ರಂದು ವಾರದ ಹಿಡಿದ ಮಂಗಲೋತ್ಸವ ಕಾರ್ಯಕ್ರಮ ಭಕ್ತಿಯಿಂದ ನಡೆದು ಸಂಪನ್ನಗೊಂಡಿತು.
ಗ್ರಾಮದ ಜನರು ಸ್ಥಳೀಯ ಎಲ್ಲ ದೇವಸ್ಥಾನಗಳಿಗೆ ತೆರಳಿ ಪೂಜೆ, ಉಡಿ ತುಂಬುವ, ನೈವೇದ್ಯ ಸಮರ್ಪಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದ ಬಳಿಕ ಸಂಜೆ.6 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಪುರದೇವರ ಪಲ್ಲಕ್ಕಿ ಉತ್ಸವ, ಗ್ರಾಮದ ಹೊರ ವಲಯದಲ್ಲಿ ಊರಿನ ಸೀಮೆಗೆ ಕಟ್ಟಲಾದ ಕರಿಯನ್ನು ಹರಿಯುವ ಸಮಾರೂಪ ಕಾರ್ಯಕ್ರಮ ಭಯ, ಭಕ್ತಿ ಸಡಗರದಿಂದ ಜರುಗಿತು.
ವಾರ ಹಿಡಿದ ಆಚರಣೆ ಸಮಿತಿಯ ಸಂಚಾಲಕ ಮಾಯಪ್ಪ ಬಾಣಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ವಾರ ಆಚರಣೆಯ ವಾರದ ಹಿಡಿದ ವಾರದ ಒಟ್ಟು ಐದು ದಿನಗಳಲ್ಲಿ ಕಟ್ಟಾ ವಾರದ ವೃತಾಚರಣೆಗೆ ಗ್ರಾಮದ ರೈತರ್ಯಾರೂ ಕೃಷಿ ಚಟುವಟಿಕೆ ಕೈಗೊಳ್ಳದೇ, ಎಲ್ಲರ ಮನೆಯಲ್ಲೂ ರೊಟ್ಟಿ ಮಾಡದೇ, ವಗ್ಗರಣೆಯಂತೂ ಹಾಕದೇ, ಮಾಂಸಾಹಾರ ಅಡುಗೆ ತಯಾರಿಸದೇ, ಊರಿನಲ್ಲಿರುವ ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‍ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಿದಲ್ಲದೇ, ಬೆಟಗೇರಿ ಗ್ರಾಮ ಸುತ್ತಲಿನ ಹತ್ತೂರಿಗೆ ವ್ಯಾಪಾರ-ವಾಣಿಜ್ಯ ವಹಿವಾಟದ ಪ್ರಮುಖ ಕೇಂದ್ರ ಸ್ಥಳವಾಗಿದ್ದರಿಂದ ವಾರ ಹಿಡಿದ ದಿನಗಳಲ್ಲಿ ಸ್ಥಳೀಯ ಹಾಗೂ ಸುತ್ತಲಿನ ಹತ್ತೂರಿನ ಸಾರ್ವಜನಿಕರ ಸಹಕಾರ, ಸ್ಥಳೀಯರ ಸೇವಾಕಾರ್ಯ ಅಭಿನಂದನಾರ್ಹವಾಗಿದೆ ಎಂದರು.
ಸ್ಥಳೀಯ ಹಿರಿಯರಾದ ಸುಭಾಷ ಕರೆಣ್ಣವರ ಮಾತನಾಡಿ, ಬೆಟಗೇರಿ ಗ್ರಾಮದಲ್ಲಿ ನಮ್ಮ ಪುರ್ವಜರು ವಾರ ಬಿಡುವ ಪದ್ದತಿ ಅನುಸರಿಸಿಕೊಂಡು ಬಂದಿದ್ದಾರೆ. ಊರಿಗೆ ಒಳ್ಳೆಯದಾಗುತ್ತದೆ ಎಂಬ ಹಿತದೃಷ್ಟಿಯಿಂದ ನಾವು ಸಹ ಈ ಪದ್ದತಿ ಮುಂದುವರಿಸಿಕೊಂಡು ಹೊಗುತ್ತಿದ್ದೆವೆ. ಊರಿನ ಸರ್ವ ಸಮುದಾಯದವರು ಸೇರಿಕೊಂಡು ಕಟ್ಟುನಿಟ್ಟಿನ ವೃತಾಚರಣೆ ಮಾಡುವದರ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು ಶ್ಲಾಘಿನೀಯವಾಗಿದೆ ಎಂದರು.
ಸ್ಥಳೀಯ ಪುರದೇವರ ಅರ್ಚಕರು, ಭಕ್ತರು ಸೇರಿದಂತೆ ವಾರ ಹಿಡಿದ ಆಚರಣೆ ಸಮಿತಿ ಸದಸ್ಯರು, ಗ್ರಾಮದ ಹಿರಿಯರು, ಮಹಿಳೆಯರು, ಗಣ್ಯರು, ಯುವಕರು, ಇತರರು ಇದ್ದರು.