ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಪುರ ಜನರಿಂದ ಬನ್ನಿ ವಿನಿಮಯ ಕಾರ್ಯಕ್ರಮ ಗುರುವಾರ ಅ.2 ರಂದು ವೈಭವದಿಂದ ನಡೆಯಿತು.
ಸ್ಥಳೀಯ ಎಲ್ಲ ದೇವರ ದೇವಾಲಯಗಳಲ್ಲ್ಲಿ ಪುರ ಜನರಿಂದ ಪೂಜೆ, ಪುನಸ್ಕಾರ, ದೀಪೋತ್ಸವ ಕಾರ್ಯಕ್ರಮ ಸಡಗರದಿಂದ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರದೇವರ ಪಲ್ಲಕ್ಕಿ ಉತ್ಸವ ವಿಜೃಂಭನೆಯಿಂದ ಜರುಗಿದ ಬಳಿಕ ಇಲ್ಲಿಯ ಡಾ. ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಗ್ರಾಮಸ್ಥರು ಬನ್ನಿ ಪೂಜೆ, ಪುರದೇವರ ಪಲ್ಲಕ್ಕಿಗಳಿಗೆ ಬನ್ನಿ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಗ್ರಾಮದಲ್ಲಿ ಮಕ್ಕಳು, ಮಹಿಳೆಯರು, ವೃದ್ದರು ಒಬ್ಬರಿಗೊಬ್ಬರೂ ಬನ್ನಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಬನ್ನಿ ತೆಗೆದುಕೊಂಡು ನಾನು ನೀನು ಬಂಗಾರದಂಗ ಇರೋಣಾ ಅಂತಾ ಬನ್ನಿ ವಿನಿಮಯ ಮಾಡಿಕೊಂಡರು. ಗ್ರಾಮದೆಲ್ಲೆಡೆಯ ಮನೆಗಳಲ್ಲಿ, ಅಕ್ಕ-ಪಕ್ಕದ ಮನೆ ಮನೆಗೆ ಮಕ್ಕಳು ಹೋಗಿ ವೃದ್ಧರಿಗೆ, ಹಿರಿಯರಿಗೆ ಬನ್ನಿ ಕೊಟ್ಟು ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದುಕೊಳ್ಳುವದು ಅವಿನಾಭಾವ ಸಂಬಂಧ ಬೆಸೆಯುವಂತಿತ್ತು. ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ನಾಗರಿಕರು, ಮಕ್ಕಳು, ಯುವಕರು ಸೇರಿದಂತೆ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.