ಬೆಟಗೇರಿ:ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ನ.22ರಿಂದ ನ.23 ರವರೆಗೆ ನಡೆಯಲಿವೆ.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಗೋಸಬಾಳ ಜಾಗೃತ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನ.22ರಂದು ಬೆಳಿಗ್ಗೆ 6 ಗಂಟೆಗೆ ಸ್ಥಳೀಯ ಜಾಗೃತ ಮಾರುತಿ ದೇವರ ದೇವಾಲಯದಲ್ಲಿರುವ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ, ಹೋಮ, ಎಲೆಪೂಜೆ, ಪಂಚಾಮೃತಾಭಿಷೇಕ, ಮುಂಜಾನೆ 10 ಗಂಟೆಗೆ ಮಹಾಪ್ರಸಾದ ಜರುಗಲಿದೆ.
ಅದೇ ದಿನ ಮಧ್ಯಾಹ್ನ 2 ಗಂಟೆಗೆ ಪುರ ಜನರಿಂದ ಪೂಜೆ, ನೈವೇದ್ಯ ಸಮರ್ಪಣೆ, ಸಾಯಂಕಾಲ 5 ಗಂಟೆಗೆ ಗ್ರಾಮದ ಸಕಲ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಸಂಜೆ 5.30 ಗಂಟೆಗೆ ಗೋಸಬಾಳ ಗ್ರಾಪಂ ಸಿಬ್ಬಂದಿಯವರಿಂದ ಕಾರ್ತಿಕ ದೀಪೋತ್ಸವ ನಡೆಯಲಿದೆ. ರಾತ್ರಿ 10 ಗಂಟೆಗೆ ಗೋಸಬಾಳ ಬಲಭೀಮ ನಾಟ್ಯ ಸಂಘದವರಿಂದ ಸಂಗ್ಯಾ ಬಾಳ್ಯಾ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ರವಿವಾರ ನ.23 ರಂದು ಬೆಳಿಗ್ಗೆ 6 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ಪಂಚಾಮೃತಾಭಿಷೇಕ, ಮಹಾಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮದ ಬಳಿಕ ಮುಂಜಾನೆ 10ಗಂಟೆಗೆ ಸ್ಥಳೀಯ ಯುವಕರ ವತಿಯಿಂದ ಮಹಾಪ್ರಾದ ಜರುಗುವುದು. ಮಧ್ಯಾಹ್ನ 1 ಗಂಟೆಗೆ ಸ್ಥಳೀಯ ಹಾಗೂ ಸುತ್ತಲಿನ ವಿವಿಧ ಹಳ್ಳಿಗಳ ವಿವಿಧ ಕಲಾ ತಂಡದವರಿಂದ ಕರಡಿ ಮಜಲು, ಹಲಿಗೆ ವಾದನ, ಡೊಳ್ಳಿನ ಮಜಲು, ಬ್ಯಾಂಡ್ ಸೇರಿದಂತೆ ಹಲವು ಕಲಾ ತಂಡಗಳಿಂದ ಭಕ್ತಿಯ ಕಲಾ ಪ್ರದರ್ಶನ ಸೇವೆ, ಸ್ಥಳೀಯ ಹಲವಾರು ಜನ ಗಣ್ಯರಿಂದ ಅನ್ನದಾನ ಸೇವೆ ನಡೆಯಲಿದೆ.
ಅಂದು, ಸಾಯಂಕಾಲ 5.30 ಗಂಟೆಗೆ ಪಲ್ಲಕ್ಕಿ ಉತ್ಸವ, ಕಾರ್ತಿಕೋತ್ಸವ, ಕಾಯಿ ಹಾರಿಸುವದು, ಸಿಹಿ ಹಂಚುವ ಕಾರ್ಯಕ್ರಮ, ರಾತ್ರಿ 10ಗಂಟೆಗೆ ಲಕ್ಷ್ಮೇಶ್ವರದ ಜೈ ಮಾತೃಭೂಮಿ ಕಲಾ ನಾಟ್ಯ ಸಂಘದವರಿಂದ ರೈತನ ಗತ್ತು ಸರಕಾರಕ್ಕೇನ ಗೊತ್ತು ಸಾಮಾಜಿಕ ನಾಟಕ ಪ್ರದರ್ಶನಗೊಂಡ ಬಳಿಕ ಪ್ರಸಕ್ತ ವರ್ಷದ ಕಾರ್ತಿಕೋತ್ಸವ ಸಮಾರೋಪಗೊಳ್ಳಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹತ್ತೂರಿನ ಗಣ್ಯರು, ರಾಜಕೀಯ ಮುಖಂಡರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಮಾರುತಿ ದೇವರ ಅಸಂಖ್ಯಾತ ಭಕ್ತರು ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಮಾರುತಿ ದೇವರ ಕಾರ್ತಿಕೋತ್ಸವ ಆಚರಣಾ ಸಮಿತಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News