ಬೆಟಗೇರಿ ಗ್ರಾಮದಲ್ಲಿ ಕಣ್ಮನ ಸೆಳೆಯುವ ಅಂಗನವಾಡಿ ಕೊಠಡಿಗಳು..!
*ಅಂಗನವಾಡಿ ಕೊಠಡಿಗಳಿಗೆ ಬಣ್ಣ ಬಣ್ಣದ ಬಾಲಸ್ನೇಹಿ ಚಿತ್ರ * ಗ್ರಾಪಂ ಕೈಗೊಂಡ ಕಾರ್ಯಕ್ಕೆ ಮೆಚ್ಚುಗೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲಾ ಅಂಗನವಾಡಿ ಕೇಂದ್ರದ ಕೊಠಡಿಗಳು ಬಣ್ಣ, ಬಣ್ಣದ ಬಾಲಸ್ನೇಹಿ ವಿವಿಧ ಚಿತ್ರ, ಅಕ್ಷರಗಳ ಚಿತ್ತಾರಗಳಿಂದ ಅಂಲಕೃತಗೊಂಡು ಮಕ್ಕಳು ಅಂಗನವಾಡಿಗಳತ್ತ ಬರುವಂತೆ ಸೆಳೆಯುತ್ತಿವೆ.
ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ ವತಿಯಿಂದ 14ನೇ ಹಣಕಾಸಿನ ಯೋಜನೆ ಅನುದಾನದ ಉಳಿಕೆ ಹಣದಲ್ಲಿ ಸುಮಾರು 1.30ಲಕ್ಷ ರೂ.ಗಳ ಲ್ಲಿ ಸ್ಥಳೀಯ ಎಲ್ಲಾ 4 ಅಂಗನವಾಡಿ ಕೇಂದ್ರದ ಕೊಠಡಿಗಳಿಗೆ ಒಳ ಮತ್ತು ಹೊರ ಗೋಡೆಗಳಿಗೆ ಬಾಲಸ್ನೇಹಿ ಅಕ್ಷರ, ವಿವಿಧ ಚಿತ್ರಗಳ ಬಣ್ಣ ಬಳಿಯುವ ಕಾರ್ಯ ಇಚೆಗೆ ನಡೆಯಿತು.
ಇಲ್ಲಿಯ ಗ್ರಾಪಂ ಪಿಡಿಒ ಎಚ್.ಎನ್.ಭಾವಿಕಟ್ಟಿ ಮಾತನಾಡಿ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಹಿರಿಯ ನಾಗರಿಕರು ಹಾಗೂ ಸ್ಥಳೀಯರು ನೀಡುತ್ತಿರುವ ಸಹಕಾರ ಶ್ಲಾಘನೀಯವಾಗಿದೆ. ಇಲ್ಲಿಯ ಗ್ರಾಪಂ ಆಡಳಿತದ ಸಹಯೋಗದಲ್ಲಿ ಸ್ಥಳೀಯರಿಗೆ ಅವಶ್ಯಕವಾದ ಮೂಲಭೂತ ಸಹಾಯ, ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಈ ವೇಳೆ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಶಿವಪ್ಪ ಐದುಡ್ಡಿ, ಈರಣ್ಣ ದಂಡಿನ, ಸಿಬ್ಬಂದಿ, ಇತರರು ಇದ್ದರು.
ಆವರಣಗೋಡೆ ನಿರ್ಮಾಣಕ್ಕೆ ಆಗ್ರಹ; ಬೆಟಗೇರಿ ಗ್ರಾಮದ ಕೆಲವು ಅಂಗನವಾಡಿ ಕೇಂದ್ರದ ಕಟ್ಟಡಗಳಿಗೆ ಆವರಣಗೋಡೆ ಅಗತ್ಯವಿದ್ದು, ಸ್ಥಳೀಯ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಶೀಘ್ರ ಇಲ್ಲಿಯ ಅಂಗನವಾಡಿ ಕೇಂದ್ರದ ಕಟ್ಟಡಗಳಿಗೆ ಆವರಣ ಗೋಡೆ ನಿರ್ಮಾಣದ ಕಾರ್ಯಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.