ಬೆಟಗೇರಿ ಸುತ್ತಮುತ್ತ ಸುರಿದ ಮಳೆ : ರೈತರಲ್ಲಿ ಹರ್ಷ
ಬೆಟಗೇರಿ: ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಸೋಮವಾರ ಜೂನ್.14 ರಂದು ಮಧ್ಯಾಹ್ನ 2 ಗಂಟೆಗೆ ಸುಮಾರು ಎರಡು ಗಂಟೆಗಳ ಕಾಲ ಮಳೆ ಸುರಿದು ಭೂಮಿ ತಂಪಾಗಿಸಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಸಂಪೂರ್ಣ ಆಗದೇ ಇದ್ದುದರಿಂದ ಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ದಿನ ಬೆಳಗಾದರೆ ಮಳೆಯ ನಿರೀಕ್ಷೆಯಲ್ಲಿ ಹಗಲಿರುಳು ಕಾಲ ಕಳೆಯುತ್ತಿದ್ದ ರೈತರು ಆಕಾಶದ ಕಡೆ ಮುಖ ಮಾಡುವಂತಾಗಿತ್ತು, ಸೋಮವಾರದಂದು ಧರೆಗಿಳಿದ ಈ ಮಳೆ ಭೂಮಿ ತಂಪಾಗಿಸಿದ್ದರಿಂದ ರೈತರು ನಿಟ್ಟಿಸಿರು ಬಿಡುವಂತಾಗಿದೆ. ಈ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕು ಪಡೆದುಕೊಳ್ಳುವಂತಾಗಿದೆ.
ಇಂದು ಸುರಿದ ಮಳೆಗೆ ಗ್ರಾಮದ ಕೆಲವು ಓಣಿಯ ಬೀದಿ ಪಕ್ಕದ ಗಟಾರಗಳು ಮಳೆ ನೀರು ತುಂಬಿ ರಸ್ತೆ ಮೇಲೆ ಹರಿದು ಕೆಲ ಹೊತ್ತು ಓಣಿಯ ಕೆಲ ರಸ್ತೆ ಮೇಲೆ ಜನರು ಓಡಾಡದ ಹಾಗೇ ಆಗಿತ್ತು. ಸೋಮವಾರದಂದು ಸುಮಾರು ಎರಡ್ಮೂರು ತಾಸು ಮಳೆಯಾಗಿ ಚಲೋ ಆಯ್ತರೀ, ಇಲ್ಲಿಯ ರೈತರಿಗೆ ಖುಷಿಯಾಗಿದೆ. ಇನ್ನೂ ಮುಂಗಾರು ಮಳೆ ಅಗತ್ಯವಿದೆ ಎಂದು ಸ್ಥಳೀಯ ನಾಗರಿಕ ಮಾಯಪ್ಪ ಬಾಣಸಿ ಖುಷಿ ಹಂಚಿಕೊಂಡರು.