ಬೆಟಗೇರಿ ಗ್ರಾಮದ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರ ದೇಶ ಸೇವೆ ಅನುಕರಣಿಯ
*ಇಂದು ನಿವೃತ್ತ ಸೈನಿಕರ ಬಳಗ ಹಾಗೂ ಗ್ರಾಮಸ್ಥರಿಂದ ಭವ್ಯ ಸ್ವಾಗತ ಮೆರವಣಿಗೆ * ಸತ್ಕಾರ ಕಾರ್ಯಕ್ರಮ
ವರದಿ: ಅಡಿವೇಶ ಮುಧೋಳ
ಬೆಟಗೇರಿ:ಗ್ರಾಮದ ಸೈನಿಕ ಮುತ್ತೆಪ್ಪ ಬಸಪ್ಪ ನೀಲಣ್ಣವರ ಅವರು ಈಗ ಸೈನಿಕ ಸೇವೆಯಿಂದ ನಿವೃತ್ತಿಯಾಗಿ ಹುಟ್ಟೂರು ಗೋಕಾಕ ತಾಲೂಕಿನ ಬೆಟಗೇರಿ ಬೆಟಗೇರಿ ಗ್ರಾಮಕ್ಕೆ ಆಗಮಿಸುತ್ತಿರುವ ಅವರಿಗೆ ಭವ್ಯ ಸ್ವಾಗತ ಮೆರವಣಿಗೆ, ಸನ್ಮಾನ ಕಾರ್ಯಕ್ರಮ ಜ.5 ರಂದು ಹಮ್ಮಿಕೊಳ್ಳಲಾಗಿದೆ.
ಬೆಟಗೇರಿ ಗ್ರಾಮದ ನಿವೃತ್ತ ಸೈನಿಕರ ಬಳಗ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸ್ಥಳೀಯ ಅಶ್ವಾರೂಢ ಶ್ರೀ ಬಸವೇಶ್ವರ ವೃತ್ತದಿಂದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದ ಭಾರತಾಂಬೆಯ ಮೂರ್ತಿ ತನಕ ಭವ್ಯ ಸ್ವಾಗತ ಮೆರವಣಿಗೆ ನಡೆದ ಬಳಿಕ ಭಾರತಾಂಬೆಯ ಮೂರ್ತಿಗೆ ಪೂಜೆ, ಪುಷ್ಪಾರ್ಪನೆ, ನಿವೃತ್ತ ಸೈನಿಕ
ಮುತ್ತೆಪ್ಪ ನೀಲಣ್ಣವರ ಅವರಿಗೆ ಸನ್ಮಾನ, ಸಿಹಿ ವಿತರಣೆ ಜರುಗಲಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ನಿವೃತ್ತ ಸೈನಿಕರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ನಿವೃತ್ತ ಸೈನಿಕರ ಬಳಗ ಪ್ರಕಟನೆಗೆ ತಿಳಿಸಿದೆ.
ಬೆಟಗೇರಿ ಗ್ರಾಮದ ರೈತಕುಟುಂಬದ ನೇಗಿಲಯೋಗಿ ತಂದೆ ಬಸಪ್ಪ, ತಾಯಿ ಬಾಗವ್ವ ಅವರ ಉದರದಲ್ಲಿ ಜೇಷ್ಠ ಪುತ್ರನಾಗಿ 1986 ಏಪ್ರೀಲ್ 5 ರಂದು ಜನಸಿದ ಅವರು ಹುಟ್ಟೂರು ಬೆಟಗೇರಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಹಿರಿಯ ಕನ್ನಡ ಶಾಲೆಯಲ್ಲಿ ಪ್ರಾಥಮಿಕ, ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ಗೋಕಾಕ ಜಿಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪೂರೈಸಿ, ಭಾರತೀಯ ಸೇನೆಗೆ ಸೇರುವ ಹಂಬಲದಿಂದ 2004ರಲ್ಲಿ ಭಾರತೀಯ ಭೂ ಸೇನೆಗೆ ಸೇರಿ, ಸಿಕಂದ್ರಾಬಾದ್ನಲ್ಲಿ ತರಬೇತಿ ಪಡೆದು, ಹಲವು ವರ್ಷಗಳ ಕಾಲ ದೇಶದ ವಿವಿಧ ರಾಜ್ಯದಡೆಯಲ್ಲಿ ಸೈನಿಕನಾಗಿ ಭಾರತಾಂಬೆಯ ಸೇವೆ ಸಲ್ಲಿಸಿದ್ದಾರೆ.
ರಾಜಸ್ಥಾನ, ಜೋದಪುರ, ಜಮ್ಮು ಕಾಶ್ಮೀರ, ಪಂಜಾಬ, ಹರಿಯಾಣ ಮತ್ತು ಸಿಕಂದ್ರಾಬಾದ್ನಲ್ಲಿ ನೂತನ ಸೈನಿಕರಿಗೆ ತರಬೇತಿ ನೀಡುವ ಅವಿಸ್ಮರಣೀಯ ಸೇವೆಗೈದ ಅವರು ಅಮರನಾಥ ಯಾತ್ರೆ ಸೇರಿದಂತೆ 2018ರಲ್ಲಿ ಕೇರಳದಲ್ಲಿ ಉಂಟಾದ ಅತಿವೃಷ್ಠಿಯಂತಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸೇವೆ ಸಲ್ಲಿಸಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳಿಂದ ಸೈ ಎನಿಸಿಕೊಂಡು, 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ, ಈಗ ಪಶ್ಚಿಮ ಬಂಗಾಳದ ಸಿಲಿಗುಡಿಯಿಂದ ಸೈನಿಕ ನಿವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಇಂದು ಸ್ವಗ್ರಾಮ ಬೆಟಗೇರಿಗೆ ಆಗಮಿಸುತ್ತಿರುವ ಸೈನಿಕ ಮುತ್ತೆಪ್ಪ ನೀಲಣ್ಣವರ ಅವರ ದೇಶ ಸೇವೆ ಇಂದಿನ ಯುವಕರಿಗೆ ಅನುಕರಣೀಯವಾಗಿದೆ.
ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರ ಅವರು ನಿವೃತ್ತಿಯ ನಂತರದ ದಿನಗಳಲ್ಲಿ ವೈಚಾರಿಕ ನೆಲಗಟ್ಟಿನ ಮೇಲೆ ಸಾರ್ವಜನಿಕ ಬದುಕು ಸಾಗಿಸುವ ಮಹತ್ವಾಕಾಂಕ್ಷೆ ಹೊಂದಿರುವ ಅವರುದೇಶ ಭಕ್ತಿ, ಪ್ರೇಮ, ಸೇವೆಗೆ ಅನಿಯಾಗುವಂತೆ ಇಂದಿನ ಯುವಕರಿಗೆ ಮಾದರಿ ವ್ಯಕ್ತಿತ್ವ ವಿಕಸನದ ಮಾರ್ಗದರ್ಶಕರಾಗಲಿ ಅಂಬುವುದು ಸ್ಥಳೀಯರ ಹಾರೈಕೆಯಾಗಿದೆ.