ಬೆಟಗೇರಿ ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರಗೆ ಅದ್ದೂರಿ ಸ್ವಾಗತ
ಬೆಟಗೇರಿ:ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧ ಮುತ್ತೆಪ್ಪ ನೀಲಣ್ಣವರ ಜ.5ರಂದು ಹುಟ್ಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಕ್ಕೆ ಆಗಮಿಸಿದ ಪ್ರಯುಕ್ತ ಸ್ಥಳೀಯ ಹಾಲಿ ಮತ್ತು ನಿವೃತ್ತ

ಸೈನಿಕರ ಬಳಗ, ಗ್ರಾಮಸ್ಥರು ಹಾಗೂ ಸ್ನೇಹಿತರು ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಬೆಟಗೇರಿ ಗ್ರಾಮದ ಅಶ್ವಾರೂಢ ಬಸವೇಶ್ವರ ವೃತ್ತದಿಂದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿರುವ ಭಾರತಾಂಬೆಯ ಮೂರ್ತಿ ತನಕ ಸಕಲ ವಾದ್ಯಮೇಳಗಳೊಂದಿಗೆ ನಿವೃತ್ತಿ ಹೊಂದಿದ ಯೋಧ ಮುತ್ತೆಪ್ಪ ನೀಲಣ್ಣವರ ಭವ್ಯ ಸ್ವಾಗತ ಮೆರವಣಿಗೆ ನಡೆದ ಬಳಿಕ ಭಾರತಾಂಬೆಯ ಮೂರ್ತಿಗೆ ಪೂಜೆ, ಪುಷ್ಪಾರ್ಪನೆ, ನಿವೃತ್ತಿ ಹೊಂದಿದ ಯೋಧ ಮುತ್ತೆಪ್ಪ ನೀಲಣ್ಣವರ ದಂಪತಿಗೆ ಸನ್ಮಾನ, ಸಿಹಿ ವಿತರಣೆ ಕಾರ್ಯಕ್ರಮ ಜರುಗಿತು.
ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಹಿರಿಯ ನಿವೃತ್ತ ಯೋಧ ಮಹಾದೇವಪ್ಪ ಹಾದಿಮನಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮಾತನಾಡಿದರು. ಈರಯ್ಯ ಹಿರೇಮಠ ಸಾನಿಧ್ಯ, ಪ್ರೌಢ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕುತುಬು ಮಿರ್ಜಾನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗೋಕಾಕ ಎನ್‍ಎಸ್‍ಎಫ್ ಪ್ರತಿನಿಧಿ ನಿಂಗಪ್ಪ ಕುರಬೇಟ ಮುಖ್ಯತಿಥಿಗಳಾಗಿ ಆಗಮಿಸಿದ್ದರು.
ನಿವೃತ್ತ ಸೈನಿಕ ಮುತ್ತೆಪ್ಪ ನೀಲಣ್ಣವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದರಲ್ಲಿ ಸಿಗುವ ಸಂತೋಷ ಯಾವ ವೃತ್ತಿಯಲ್ಲಿ ದೊರಕುವುದಿಲ್ಲಾ, ನಿಮ್ಮೆಲ್ಲರ ಸ್ವಾಗತ ಗೌರವದಿಂದ ನನ್ನ 17 ವರ್ಷಗಳ ಸೈನಿಕ ವೃತ್ತಿ ಬದುಕು ಸಾರ್ಥಕವಾಯಿತು ಎಂದರು.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹಾಲಿ ಮತ್ತು ನಿವೃತ್ತ ಸೈನಿಕರು, ಗಣ್ಯರು, ತಾಪಂ, ಗ್ರಾಪಂ ಸದಸ್ಯರು, ವಿವಿಧ ಸಂಘ, ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸ್ನೇಹಿತರು, ಸ್ಥಳೀಯ ಹಾಲಿ ಮತ್ತು ನಿವೃತ್ತ ಸೈನಿಕರ ಬಳಗದ ಪದಾಧಿಕಾರಿಗಳು, ಸದಸ್ಯರು, ವಿವಿಡಿಸಪ್ರೌ ಶಾಲೆಯ ಶಿಕ್ಷಕರು, ಸಿಬ್ಬಂದಿ, ಎಸ್‍ಎಸ್‍ವೈ ಪಿಯು ಕಾಲೇಜಿನ ಪ್ರಾಚಾರ್ಯ, ಉಪನ್ಯಾಸಕರು, ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು.
IN MUDALGI Latest Kannada News