ಗೋಕಾಕ- ಬೌದ್ಧ ಧರ್ಮವು ಜಾತಿ ಪದ್ಧತಿ ವ್ಯವಸ್ಥೆಯನ್ನು ತಿರಸ್ಕರಿಸಿ ಸಾಮಾಜಿಕ ಸಮಾನತೆಗೆ ಒತ್ತು ನೀಡುತ್ತದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿಯವರು ಹೇಳಿದರು.
ಇಲ್ಲಿನ ಎಸ್ಎಸ್ಎಫ್ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಜರುಗಿದ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನವಯಾನ ಬೌದ್ಧ ಧರ್ಮದ ಆವೃತ್ತಿಯಾಗಿದೆ ಎಂದು ತಿಳಿಸಿದರು.
ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟ ಡಾ. ಅಂಬೇಡ್ಕರ್ ಅವರು ಪ್ರಜಾ ಪ್ರಭುತ್ವ ದೇಶವಾಗಲು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅಂತೆಯೇ ಇವರೊಬ್ಬ ವಿಶ್ವರತ್ನ ಎನಿಸಿಕೊಂಡರು. ಡಾ. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಇಂದಿನ ಪೀಳಿಗೆಯು ಬೆಳೆಸಿಕೊಳ್ಳಬೇಕಿದೆ ಎಂದವರು ಹೇಳಿದರು.
ಅಕ್ಟೋಬರ್ 14, 1956 ರಲ್ಲಿ ಅಂಬೇಡ್ಕರ್ ಅವರು ತನ್ನ ಅನುಯಾಯಿಗಳೊದಿಗೆ ನಾಗ್ಪುರದಲ್ಲಿ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ಇದು ದಲಿತ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಉನ್ನತಿ, ಪ್ರಗತಿಗೆ ಒತ್ತು ನೀಡುತ್ತದೆ ಎಂದು ಅವರು ತಿಳಿಸಿದರು.
ಸರ್ವೋತ್ತಮ ಜಾರಕಿಹೊಳಿಯವರು ಮಹಾರಾಷ್ಟ್ರ ರಾಜ್ಯದ ನಾಗ್ಪುರದಲ್ಲಿ ನಡೆಯುವ ಬೌದ್ಧ ಧರ್ಮದ ದೀಕ್ಷಾ ಭೂಮಿ ಯಾತ್ರೆಗೆ ಹೊರಡುವ ಮೂಡಲಗಿ ತಾಲೂಕಿನ ಅನುಯಾಯಿಗಳ ಪ್ರವಾಸಕ್ಕೆ ಚಾಲನೆ ನೀಡಿದರು.
ನಾಗ್ಪುರದಲ್ಲಿ ಜರುಗಲಿರುವ ಅಂಬೇಡ್ಕರ್ ಅವರ ದೀಕ್ಷಾಭೂಮಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮೂಡಲಗಿ ತಾಲ್ಲೂಕಿನಿಂದ 31 ಜನರು ಪಾಲ್ಗೊಳ್ಳುತ್ತಿದ್ದು, ಇದಕ್ಕಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ರಾಜಹಂಸ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ.
ಗೋಕಾಕ ತಹಶೀಲ್ದಾರ ಡಾ. ಮೋಹನ್ ಭಸ್ಮೆ, ತಾ.ಪಂ. ಇ.ಓ. ಪರಶುರಾಮ ಗಸ್ತೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ( ಪ್ರ) ಅಶೋಕ ಮಲಬನ್ನವರ, ಶಾಸಕರ ಆಪ್ತ ಸಹಾಯಕರಾದ ಲಕ್ಕಪ್ಪ ಲೋಕುರಿ, ಸಿ.ಪಿ.ಯಕ್ಸಂಬಿ, ಇಲಾಖೆಯ ಮತ್ತಿತರರು, ದಲಿತ ಜನಾಂಗದ ಪ್ರಮುಖರು ಉಪಸ್ಥಿತರಿದ್ದರು.
