
ಗೋಕಾಕ- ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಕ್ಕಳ ಮತ್ತು ತಾಯಂದಿರರ ಪ್ರೀತಿಗೆ ಪಾತ್ರರಾಗುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ನೂತನವಾಗಿ ನೇಮಕಾತಿಯನ್ನು ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಲಹೆ ಮಾಡಿದರು.
ಇಲ್ಲಿನ ಎನ್ಎಸ್ಎಫ್ ಕಚೇರಿಯಲ್ಲಿ ಅರಭಾವಿ ಶಿಶು ಅಭಿವೃದ್ಧಿ ಯೋಜನೆಯಿಂದ ಜರುಗಿದ ಕಾರ್ಯಕ್ರಮದಲ್ಲಿ ಹೊಸದಾಗಿ ನೇಮಕಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದ ಅವರು, ಶಿಸ್ತು, ಸಂಯಮದಿಂದ ಕೆಲಸ ಮಾಡಿ ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುವಂತೆಯೂ ಅವರು ಇದೇ ಸಂದರ್ಭದಲ್ಲಿ ಕಾರ್ಯಕರ್ತೆಯರಿಗೆ ಕಿವಿಮಾತು ಹೇಳಿದರು.
ಅರಭಾವಿ ಶಿಶು ಅಭಿವೃದ್ಧಿ ಇಲಾಖೆಯಲ್ಲಿ 11 ಕಾರ್ಯಕರ್ತೆಯರು ಮತ್ತು 34 ಸಹಾಯಕಿಯರನ್ನು ಅತ್ಯಂತ ಪ್ರಾಮಾಣಿಕವಾಗಿ ಆಯ್ಕೆ ಮಾಡಲಾಗಿದೆ. ಇಲಾಖೆಯ ನಿಯಮದಂತೆ ವಿಧವೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ನಿಮ್ಮಲ್ಲಿರುವ ಪ್ರತಿಭೆಯೇ ಈ ಆಯ್ಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ 6 ವರ್ಷದೊಳಗಿನ ಮಕ್ಕಳ ಬೆಳವಣಿಗೆಯಲ್ಲಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಬಾಣಂತಿಯರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕಾಂಶವನ್ನು ವಿತರಿಸಬೇಕು. ಎಲ್ಲ ಮಕ್ಕಳನ್ನು ಒಂದೇ ತೆರನಾಗಿ ನೋಡಬೇಕು.ಮಕ್ಕಳಲ್ಲಿ ತಾರತಮ್ಯ ಧೋರಣೆಯನ್ನು ಅನುಸರಿಸಬಾರದೆಂದು ಅವರು ಕಿವಿಮಾತು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆದೇಶ ಪತ್ರಗಳನ್ನು ವಿತರಿಸಿದರು.
ನಂತರ ಶಾಸಕರನ್ನು ಇಲಾಖೆಯಿಂದ ಸತ್ಕರಿಸಲಾಯಿತು.
ಅರಭಾವಿ ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ, ಮೇಲ್ವಿಚಾರಕರು ಉಪಸ್ಥಿತರಿದ್ದರು.
IN MUDALGI Latest Kannada News