ಗೋಕಾಕ: ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ಇಳಿಮುಖ ವಾಗಲು ವೈದ್ಯರ ಪಾತ್ರ ಬಹುಮುಖ್ಯವಾಗಿದ್ದು, ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ಸೋಂಕಿತರಿಗೆ ವ್ಯವಸ್ಥಿತ ಚಿಕಿತ್ಸೆ ನೀಡಿದರೆ ಕೊರೋನಾ ತಡೆಗಟ್ಟಲು ಸಾಧ್ಯ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಭೆಯನ್ನು ನಡೆಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮೊದಲಿಗಿಂತ ಕೊರೋನಾ ಪ್ರಕರಣಗಳಲ್ಲಿ ಭಾರಿ ಇಳಿಮುಖ ಕಂಡಿದ್ದು, ಗ್ರಾಮೀಣ ಭಾಗದಲ್ಲಿ ಸೋಂಕಿನ ಲಕ್ಷಣಗಳನ್ನು ಕಂಡುಬಂದರೆ ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ವತಿಯಿಂದ ಗ್ರಾಮದಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿನ ಪ್ರತಿ ಹಳ್ಳಿಗಳಿಗಲ್ಲಿ ಕೊರೋನಾ ಪರೀಕ್ಷಾ ಕೇಂದ್ರಗಳನ್ನು ತೆರೆಲಾಗಿದ್ದು, ವೈದ್ಯರು ಅದನ್ನು ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಮಧುಮೇಹ ಮತ್ತು ಹಿರಿಯ ನಾಗರಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವರು ಸುರಕ್ಷಿತವಾಗಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ, ಪ್ರಬಾರಿ ಡಿವಾಯ್‍ಎಸ್‍ಪಿ ಮನೋಜಕುಮಾರ್ ನಾಯ್ಕ, ಹಿರಿಯ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ, ತಾಲೂಕಾ ವೈದ್ಯಾಧಿಕಾರಿ ಡಾ.ಎಂ.ಎಸ್.ಕೊಪ್ಪದ, ಮುಖ್ಯವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ್, ಡಾ. ಮಹೇಶ ಕೋಣಿ, ಡಾ.ಬಿ.ಎಚ್. ಬಾಗಲಕೊಟ ಪೌರಾಯುಕ್ತ ಶಿವಾನಂದ ಹಿರೇಮಠ ಸೇರಿದಂತೆ ಇತರರು ಇದ್ದರು.
