ಗೋಕಾಕ : ಕಳೆದ ಮಾರ್ಚ, ಎಪ್ರೀಲ್ ತಿಂಗಳಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ತಾಲೂಕಿನ ಕೌಜಲಗಿಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಹಾಲಕ್ಷ್ಮೀ ತಳವಾರ ಅವರನ್ನು ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸತ್ಕರಿಸಲಾಯಿತು.
ಮರು ಮೌಲ್ಯಮಾಪನದಲ್ಲಿ 625 ರ ಪೈಕಿ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಅರಭಾವಿ ಕ್ಷೇತ್ರದ ಕೀರ್ತಿ ಪತಾಕೆಯನ್ನು ಹಾರಿಸಿರುವ ಮಹಾಲಕ್ಷ್ಮೀ ತಳವಾರ ಅವರನ್ನು ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ ಅವರು ಸತ್ಕರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿದ್ಯಾರ್ಥಿಗಳ ಪಾಲಿಗೆ ಕಾಮಧೇನು ಕಲ್ಪವೃಕ್ಷದಂತೆ ಪೋಷಿಸುತ್ತ ವಿದ್ಯಾರ್ಥಿಗಳಿಗೆ ಬೆಳಕಾಗಿದ್ದಾರೆ. ಕೌಜಲಗಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಮಹಾಲಕ್ಷ್ಮೀ ತಳವಾರ ಇವರಿಗೆ ಕಳೆದ ಎಸ್‍ಎಸ್‍ಎಲ್‍ಸಿ ಫಲಿತಾಂಶದ ಸಂದರ್ಭದಲ್ಲಿ 625ಕ್ಕೆ 623 ಅಂಕಗಳು ಲಭಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಒಲಿದಿತ್ತು. ಆದರೂ ಮರು ಮೌಲ್ಯಮಾಪನದಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿರುವುದು ನಮ್ಮ ಮೂಡಲಗಿ ವಲಯಕ್ಕೆ ಹೆಮ್ಮೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೌಜಲಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಅವ್ವಣ್ಣ ವಡೇರ, ಉಪ ಪ್ರಾಂಶುಪಾಲ ಸುಭಾಸ ವಲ್ಯಾಪೂರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಮಾಲತೇಶ ಸಣ್ಣಕ್ಕಿ, ವಿದ್ಯಾರ್ಥಿನಿ ಪಾಲಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.