ಮೆಳವಂಕಿ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸರ್ವೋತ್ತಮ ಜಾರಕಿಹೊಳಿ
ಗೋಕಾಕ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದ ಸಾರ್ವಜನಿಕ ಸಂಚಾರಕ್ಕಾಗಿ ಮೆಳವಂಕಿ ಹತ್ತಿರ ಸೇತುವೆ ನಿರ್ಮಾಣ ಕಾಮಗಾರಿಗೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ತಿಳಿಸಿದರು.
ಮಂಗಳವಾರದಂದು ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಮಂಜೂರಾದ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಕಾಮಗಾರಿ ಅನುಷ್ಠಾನದಿಂದ ದಂಡಿನಮಾರ್ಗ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜನರು ಎಂದರೆ ಎಲ್ಲಿಲ್ಲದ ಪ್ರೀತಿ. ಜನರ ಕಷ್ಠ ಕಾರ್ಪಣ್ಯಗಳನ್ನು ಅರಿತಿರುವ ಅವರಿಗೆ ಎಲ್ಲ ಸಮುದಾಯದ ಜನರು ತೋರುತ್ತಿರುವ ಕಾಳಜಿ ಹಾಗೂ ಪ್ರೀತಿಯಿಂದ ಅವರನ್ನು ಶಾಸಕರೆಂದು ಭಾವಿಸದೇ ತಮ್ಮ ಮನೆಯ ಮಗನಂತೆ ಭಾವಿಸಿಕೊಂಡು ಅದರಂತೆ ನಡೆಯುತ್ತಿರುವ ಜನರಿಗೆ ನಾವು ಯಾವತ್ತೂ ಆಭಾರಿಯಾಗಿದ್ದೇವೆ. ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿರುವ ಅವರಿಗೆ ಮುಂದಿನ ದಿನಗಳಲ್ಲಿಯೂ ಬೆನ್ನೆಲುಬಾಗಿ ನಿಲ್ಲುವಂತೆ ಗ್ರಾಮಸ್ಥರಲ್ಲಿ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮೆಳವಂಕಿ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಶಿಂತ್ರಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಶಾಸಕರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಚನ್ನಮಲ್ಲಿಕಾರ್ಜುನ ಯಕ್ಷಂಬಿ, ಮುಖಂಡರಾದ ಸಿದ್ದಪ್ಪ ಹಂಜಿ, ಮಹಾದೇವ ಪತ್ತಾರ, ಅಲ್ಲಪ್ಪ ಕಂಕಣವಾಡಿ, ಈರಪ್ಪ ಬೀರನಗಡ್ಡಿ, ಸತ್ತೆಪ್ಪ ಬಬಲಿ, ಎ.ಎಸ್. ಅಗ್ನೆಪ್ಪನವರ, ಸಣ್ಣದೊಡ್ಡಪ್ಪ ಕರೆಪ್ಪನವರ, ಅಡಿವೆಪ್ಪ ಕಂಕಾಳಿ, ಮಾರುತಿ ನಾಯ್ಕ, ಘೋರ್ಪಡೆ, ಬಾಳಪ್ಪ ಮೆಳವಂಕಿ, ರಾಮಣ್ಣಾ ಕಾಪಸಿ, ಲೋಕೋಪಯೋಗಿ ಇಲಾಖೆಯ ಎಇ ಸುರೇಶ ಗಸ್ತಿ, ಗುತ್ತಿಗೆದಾರ ಸುಧಾಕರ ಶೆಟ್ಟಿ, ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ ಗ್ರಾಮಗಳ ಮುಖಂಡರು ಗ್ರಾಮ ಪಂಚಾಯತ ಸದಸ್ಯರು, ಪಿಕೆಪಿಎಸ್ ಸದಸ್ಯರು ಉಪಸ್ಥಿತರಿದ್ದರು.
ಕೋಟ್ : ಮೆಳವಂಕಿ ಗ್ರಾಮದ ಹತ್ತಿರ ಸೇತುವೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ರೂ. ಅನುದಾನ ಬಂದಿದೆ. 2 ತಿಂಗಳಲ್ಲಿ ಈ ಕಾಮಗಾರಿಯನ್ನು ಕೈಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಗೋಕಾಕದಿಂದ ಕೌಜಲಗಿವರೆಗಿನ (ದಂಡಿನಮಾರ್ಗ) ಮಾರ್ಗದ ಪ್ರಯಾಣಿಕರಿಗೆ ಈ ಸೇತುವೆ ಅನುಕೂಲವಾಗಲಿದೆ.
ಬಾಲಚಂದ್ರ ಜಾರಕಿಹೊಳಿ, ಶಾಸಕರು.