ಪ್ರಧಾನಿ ಮೋದಿಯವರಿಂದ ಭಾರತಕ್ಕೆ ವಿಶ್ವ ಮನ್ನಣೆ : ಚಂದ್ರಶೇಖರ ಕವಟಗಿ
ಗೋಕಾಕ : ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗಲು ಕಾರ್ಯಕರ್ತರು ಈಗಿಂದಲೇ ಸನ್ನದ್ಧರಾಗಿ ಕೆಲಸಗಳನ್ನು ಮಾಡುವಂತೆ ಬೆಳಗಾವಿ ಬಿಜೆಪಿ ವಿಭಾಗೀಯ ಪ್ರಭಾರಿ ಚಂದ್ರಶೇಖರ ಕವಟಗಿ ಕಾರ್ಯಕರ್ತರಿಗೆ ಕರೆ ನೀಡಿದರು.
ಸೋಮವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಜರುಗಿದ ಅರಭಾವಿ ಬಿಜೆಪಿ ಮಂಡಲದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸುವಂತೆ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನೇತೃತ್ವದಲ್ಲಿ ಭಾರತ ದೇಶ ಜಗತ್ತಿನಲ್ಲಿಯೇ ಪ್ರಗತಿಶೀಲ ರಾಷ್ಟ್ರವಾಗುವತ್ತ ಗುರಿಯನ್ನು ಹೊಂದಿದೆ. ಈ ದಿಸೆಯಲ್ಲಿ ಪ್ರಧಾನಿಗಳು ದಿನದ 18 ತಾಸು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಲಸಿಕೆ ಮೈತ್ರಿ ಮೂಲಕ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನೂರಕ್ಕೂ ಅಧಿಕ ರಾಷ್ಟ್ರಗಳಿಗೆ ನೆರವು ನೀಡಿದ್ದಾರೆ ಎಂದು ಹೇಳಿದರು.
ಭಾರತವು ತನ್ನ ಜಿ20 ಅಧ್ಯಕ್ಷತೆಯ ಮೂಲಕ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಹೊಸ ಉತ್ತೇಜನಗಳನ್ನು ನೀಡಿದ್ದಾರೆ. ಶೇ 7.2 ರಷ್ಟು ಬೆಳವಣಿಗೆಯಿಂದ ಭಾರತವು ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಗಳಾಗಿ 9 ವರ್ಷ ಅಧಿಕಾರವನ್ನು ಪೂರೈಸಿದ್ದಾರೆ. ಈ ದಿಸೆಯಲ್ಲಿ ಸೇವೆ, ಸುಸ್ಯಾಸನ ಬಡವರ ಕಲ್ಯಾಣ, ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕರ್ತರು ಪ್ರತಿ ಮನೆ ಮನೆಗಳಿಗೆ ತೆರಳಿ ಪ್ರಧಾನಿಗಳ ಜನಪರ ಕಾರ್ಯಗಳನ್ನು ಪ್ರಚಾರಪಡಿಸುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಮಾತನಾಡಿದರು.
ಅರಭಾವಿ ಮಂಡಲ ಪ್ರಧಾನ ಕಾರ್ಯದರ್ಶಿ ಪರಸಪ್ಪ ಬಬಲಿ ಕಾರ್ಯಕ್ರಮ ನಿರೂಪಿಸಿದರು.