ಇಂದು ಶಿಕ್ಷಕರ ದಿನಾಚರಣೆಗೆ ಸಜ್ಜಾಗಿರುವ ಹೊಸಟ್ಟಿ ಗ್ರಾಮ
‘ಹೊಸಟ್ಟಿಗೆ ‘ಹೊಸ ಬೆಳಕು’ ನೀಡಿದ ಶಿಕ್ಷಕರು’
ವರದಿ: ಬಾಲಶೇಖರ ಬಂದಿ
ಮೂಡಲಗಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಭವಿಷ್ಯವಿಲ್ಲ ಎಂದು ಮೂಗು ಮುರಿಯವವರಿಗೆ ಮೂಡಲಗಿ ತಾಲ್ಲೂಕಿನ ಹೊಸಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿತ ಅದೆಷ್ಟೋ ಮಕ್ಕಳು ಮಾಡಿರುವ ಸಾಧನೆಯನ್ನು ಗಮನಿಸಿದರೆ ಅಚ್ಚರಿಪಡುವಂತಿದೆ. ಒಂದು ಅವಧಿಯಲ್ಲಿ ಕುಗ್ರಾಮ ಎನಿಸಿದ್ದ ಹೊಸಟ್ಟಿ ಸರ್ಕಾರಿ ಶಾಲೆಯಲ್ಲಿ ಕಲಿತ ಗ್ರಾಮದ ಪರುಶರಾಮ ನಾಯಿಕ ಎನ್‌ಡಿಎ ಪಾಸು ಮಾಡಿ ಸಧ್ಯ ಭಾರತೀಯ ಸೇನೆಯಲ್ಲಿ ಕರ್ನಲ್‌ರಾಗಿ ದೇಶ ಸೇವೆ ಸಲ್ಲಿಸುತ್ತಿದ್ದಾರೆ. ಪಿ.ಬಿ. ಹಿರೇಮಠ ಅವರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದು, ಡಿ.ಡಿ. ಮೇಚನ್ನವರ ಹುಬ್ಬಳ್ಳಿಯಲ್ಲಿ ಸದ್ಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದರೆ, ಮಾರುತಿ ದಾಸಣ್ಣವರ ಸಾಹಿತಿಯಾಗಿ ನಾಡಿನಲ್ಲಿ ಗುರುತಿಸಿಕೊಂಡಿದ್ದಾರೆ. ನಿಸ್ವಾರ್ಥದಿಂದ ಅಕ್ಷರ ಬೀಜ ಬಿತ್ತಿದ್ದ ಗುರುಗಳ ಕರುಣೆಯಿಂದ ಇಂದು ಹೊಸಟ್ಟಿ ಗ್ರಾಮದಲ್ಲಿ ಶಿಕ್ಷಕರು, ವೈದ್ಯರು, ಎಂಜಿನಿಯರ್, ಸಂಶೋಧಕರು, ಸೈನಿಕರು, ಶ್ರೇಷ್ಠ ಕೀರ್ತನಕಾರರು, ಕ್ರೀಡಾಪಟುಗಳಾಗಿ ಗ್ರಾಮದ ಕೀರ್ತಿ ಹೆಚ್ಚಿಸಲು ಕಾರಣರಾಗಿದ್ದಾರೆ.
‘ಸೀತಾರಾಮ ಪತ್ತಾರ, ಎಸ್.ಎಂ. ನಾವಿ, ಸಿದ್ದಪ್ಪ ನಾಯಿಕ, ಬಿ.ಬಿ. ಹೊಸಮನಿ, ಸಿದ್ದಲಿಂಗ ನಾಯಿಕ ಈ ಎಲ್ಲ ಗುರುವರ್ಯರು ಗ್ರಾಮದ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿ ರಾಜ್ಯದ ಶಿಕ್ಷಣ ಮತ್ತು ಸಾಂಸ್ಕೃತಿಕ ನಕಾಶೆಯಲ್ಲಿ ಹೊಸಟ್ಟಿ ಗ್ರಾಮವು ಗುರುತಿಸುವಂತೆ ಮಾಡಿರುವರು. ಇಡೀ ಹಳ್ಳಿಯ ಮಕ್ಕಳು ಕಲಿಯುವಂತೆ ಮಾಡಿದ ದೇವರು’ ಎಂದು ಶಾಲೆಯಲ್ಲಿ ಕಲಿತು ಸದ್ಯ ಮಡಿಕೇರಿಯ ನವೋದಯ ಶಾಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿರುವ ಮಾರುತಿ ದಾಸಣ್ಣವರ ಶಿಕ್ಷಕರನ್ನು ನೆನೆಸಿಕೊಳ್ಳುತ್ತಾರೆ.
ಪ್ರಗತಿಯತ್ತ: ದೇಶಕ್ಕೆ ಸ್ವಾತಂತ್ರ್ಯ ದೊರೆತ ವರ್ಷ 1947ರಲ್ಲಿ ಗ್ರಾಮದ ಹಣಮಂತ ದೇವರ ಚಾವಡಿಯಲ್ಲಿ ಕೇವಲ 25 ಮಕ್ಕಳೊಂದಿಗೆ ಇಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿತು. ಒಂದು ಕಡೆ ಸ್ವಾತಂತ್ರ್ಯ ದೊರೆತ ಖುಷಿಯಾದರೆ ಇನ್ನೊಂದೆಡೆ ಇನ್ನು ವಿದ್ಯುತ್ ಕಾಣದ ಕುಗ್ರಾಮಕ್ಕೆ ಸರ್ಕಾರಿ ಶಾಲೆಯ ಮೂಲಕ ಜ್ಞಾನದ ಬೆಳಕು ಹರಿಯಿತು ಎನ್ನುವ ಖುಷಿ’ ಎಂದು ಗ್ರಾಮದ ಹಿರಿಯರು ‘ಪ್ರಜಾವಾಣಿ’ಯೊಂದಿಗೆ ಹಳೆಯ ನೆನಪನ್ನು ಮೆಲುಕುಹಾಕಿದರು. 1966ರಲ್ಲಿ ಗ್ರಾಮದ ದೇಸಾಯಿ ಕಟುಂಬದವರು ನೀಡಿದ 1 ಎಕರೆ ಭೂಮಿಯಲ್ಲಿ ಶಾಲೆಗೆ 2 ಕೊಠಡಿಗಳನ್ನು ನಿರ್ಮಿಸಿರುವರು. ಸದ್ಯ 1ರಿಂದ 7ನೇ ತರಗತಿವರೆಗೆ ಕಲಿಕೆ ಇದ್ದು, ಸುಸಜ್ಜಿತವಾದ 7 ಕೊಠಡಿಗಳಿವೆ. 7 ಜನ ನುರಿತ ಶಿಕ್ಷರಿದ್ದು ಅವರಲ್ಲಿ ಕೆಲವರು ಸ್ನಾತಕೋತ್ತರ ಪದವಿ ಮಾಡಿಕೊಂಡಿರುವರು. ಹಲವಾರು ವರ್ಷಗಳಿಂದ ಪ್ರತಿ ವರ್ಷ 200 ವಿದ್ಯಾರ್ಥಿಗಳ ದಾಖಲಾತಿ ಇದ್ದು, ಎಲ್ಲರೂ ರೈತರ, ಕೂಲಿಕಾರರ ಮಕ್ಕಳು ಇರುವರು. ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ನೀಡಿದ 2500 ಪುಸ್ತಕಗಳ ಸಂಗ್ರಹ ಗ್ರಂಥಾಲಯ ಇದೆ. ‘ಪ್ರತಿ ವರ್ಷವೂ ಮೊರಾರ್ಜಿ ವಸತಿ ಶಾಲೆಗೆ 5ರಿಂದ 8 ಮಕ್ಕಳು ಆಯ್ಕೆಯಾಗುತ್ತಿದ್ದಾರೆ. ಪರೀಕ್ಷೆ ಸಿದ್ದತೆಗಾಗಿ ಬೆಳಿಗ್ಗೆ ಮತ್ತು ಸಂಜೆ ಹೊತ್ತು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಿರುವೆವು’ ಎಂದು ಈಗಿರುವ ಮುಖ್ಯ ಶಿಕ್ಷಕ ಎಂ.ಎಸ್. ಸಿದ್ದಾಪುರ ತಿಳಿಸಿದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ಧೇಶದಿಂದ 7ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿನಿಗೆ ದಿ.ಗಂಗಮ್ಮ ನಾಯಿಕ ಅವರ ಹೆಸರಿನಲ್ಲಿ ₹10 ಸಾವಿರ ನಗದು ಮತ್ತು ವಿದ್ಯಾರ್ಥಿಗೆ ದಿ. ಮಹಾದೇವ ನಾಯಿಕ ಸ್ಮರಣೆಯಲ್ಲಿ ₹5 ಸಾವಿರ ನಗದು ಪ್ರೋತ್ಸಾಹ ಹಣ ನೀಡುವರು.
ಸಮುದಾಯದ ಕೊಡುಗೆ: ಹೊಸಟ್ಟಿ ಗ್ರಾಮಕ್ಕೆ ಜ್ಞಾನ ದೇಗುಲವಿನಿಸಿರುವ ಸರ್ಕಾರಿ ಶಾಲೆಗೆ ಸ್ಥಳೀಯರು, ಎಸ್‌ಡಿಎಂಸಿ ಸದಸ್ಯರು ಮತ್ತು ಈ ಶಾಲೆಯಲ್ಲಿ ಕಲಿತು ಭವಿಷ್ಯ ನಿರ್ಮಿಸಿಕೊಂಡಿರುವ ಮಹನೀಯರು ಮನಬಿಚ್ಚಿ ದೇಣಿಗೆ ನೀಡಿದ್ದರಿಂದ ಶಾಲೆಯು ಸುಸಜ್ಜಿತವಾಗಿ ಬೆಳೆದು ನಿಂತಿದೆ. ₹1 ಲಕ್ಷ ವೆಚ್ಚದಲ್ಲಿ ಮೇಜು, ಖುರ್ಚಿ, ಸ್ಟೀಲ್ ಕಪಾಟು ಸ್ಥಳೀಯರು ನೀಡಿದ್ದಾರೆ. ಹಳೆಯ ವಿದ್ಯಾರ್ಥಿಗಳು ಸೇರಿ ₹50 ಸಾವಿರ ವೆಚ್ಚದಲ್ಲಿ ಕಂಪ್ಯೂಟರ್, ಪ್ರಿಂಟರ್ ನೀಡಿದ್ದಾರೆ. ಬೆಂಗಳೂರಿನ ಯುಥ್ ಪಾರಾ್ ಸೇವಾದವರು ₹50 ಸಾವಿರ ವೆಚ್ಚದ ಶುದ್ಧ ನೀರಿನ ವ್ಯವಸ್ಥೆ, ಮಕ್ಕಳಿಗೆ ಶಾಲಾ ಬ್ಯಾಗ್ ನೀಡಿದ್ದರೆ, ಟೆಕ್ಸ್‌ಸ್ ಕಂಪ್ಯೂಟರ್‌ದವರು ₹1 ಲಕ್ಷ ವೆಚ್ಚದ ಕ್ರೀಡಾ ಸಲಕರಣೆ ಮತ್ತು ಎಂಡಿ ಪರಿಕರ ನೀಡಿದ್ದಾರೆ. ಹುಣಶ್ಯಾಳ ಪಿವೈ ಗ್ರಾಮ ಪಂಚಾಯ್ತಿಯಿಂದ ನರೇಗಾ ಯೋಜನೆಯಲ್ಲಿ ಹೈಟೆಕ್ ಶೌಚಾಲಯ, ಆವರಣಕ್ಕ ಪೇವರ್ಸ್ ಅಳವಡಿಸಿದ್ದಾರೆ. ಆವರಣದಲ್ಲಿ ಗಿಡಗಳಿಂದ ವಿಶೇಷ ಕಳೆ ಕಟ್ಟಿದೆ. ‘ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಆಸಕ್ತಿ ವಹಿಸಿ ₹18 ಲಕ್ಷ ವೆಚ್ಚದ ಬೋಜನಾಲಯ ನಿರ್ಮಿಸಿದ್ದು, ಮಕ್ಕಳಿಗೆ ಕುಳಿತು ಊಟ ಮಾಡಲು ಆಸನಗಳ ವ್ಯವಸ್ಥೆ ಇದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಅವರು ‘ ಪತ್ರಿಕೆ ’ಗೆ ಪ್ರತಿಕ್ರಿಯಿಸಿದರು.
ವಲಯದ ಶಿಕ್ಷಕರ ದಿನಾಚರಣೆಯ ಆತಿಥ್ಯ
ಮೂಡಲಗಿಯ ಶೈಕ್ಷಣಿಕ ವಲಯದ 2024ರ ಶಿಕ್ಷಕರ ದಿನಾಚರಣೆಯನ್ನು ಹೊಸಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ. 5ರಂದು ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಗ್ರಾಮವು ತಳಿರು ತೋರಣ, ಸ್ವಾಗತ ಕಮಾನುಗಳು, ಬ್ಯಾನರ್, ಪ್ಲೆಕ್ಸ್‌ಗಳಿಂದ ಅಲಂಕಾರಗೊಂಡಿದೆ. ಶಾಲೆಯ ಗೋಡೆಗಳು ಶೈಕ್ಷಣಿಕ ವಿಷಯಗಳ ಚಿತ್ರಗಳ ಚಿತ್ತಾರಗಳಿಂದ ಕಂಗೋಳಿಸುತ್ತಲಿವೆ. ವಲಯದಿಂದ ಬರುವ ಸಾವಿರಾರು ಸಂಖ್ಯೆಯ ಶಿಕ್ಷಕರನ್ನು ಬರಮಾಡಿಕೊಳ್ಳಲು ಗ್ರಾಮದ ಜನರು ಸಿದ್ದರಾಗಿದ್ದಾರೆ. ಧರ್ಮ ಸಾಮರಸ್ಯತೆಗೆ ಹೆಸರಾಗಿರುವ ಹೊಸಟ್ಟಿ ಗ್ರಾಮದ ದೈವಭಕ್ತರು. ಭಜನೆ, ಕೀರ್ತನೆ, ವಾರಕರಿ ಸಂಪ್ರದಾಯ, ಮೊಹರಂ ಎಲ್ಲವವನ್ನು ಕೂಡಿಯೇ ಆಚರಿಸುವ ಮೂಲಕ ಭಾವೈಕ್ಯತೆಗೆ ಹೆಸರಾಗಿದೆ.
‘ಹೊಸಟ್ಟಿ ಗ್ರಾಮದ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಶಿಕ್ಷಕರ ಮತ್ತು ಸರ್ಕಾರಿ ಶಾಲೆಯ ಮಹತ್ವವನ್ನು ಸಾರುತ್ತದೆ. ಹೊಸಟ್ಟಿ ಸರ್ಕಾರಿ ಶಾಲೆಗೆ ಪ್ರಸಕ್ತ ಕ್ರಿಯಾ ಯೋಜನೆಯಲ್ಲಿ 2 ಕೊಠಡಿಗಳಿಗೆ ಅನುದಾನ ಕೊಡಿಸುವೆನು’
ಬಾಲಚಂದ್ರ ಜರಕಿಹೊಳಿ, ಅರಭಾವಿ ಶಾಸಕರು.
‘ಶಾಲಾ ಸಂಕುಲದೊಂದಿಗೆ ಸಮುದಾಯ ಕೈಜೋಡಿಸಿದರೆ ಸರ್ಕಾರಿ ಶಾಲೆಗಳು ಬೆಳೆಯುತ್ತವೆ ಎನ್ನುವುದಕ್ಕೆ ಹೊಸಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯು ಉತ್ತಮ ನಿದರ್ಶನವಾಗಿದೆ. ಇದು ಬೇರೆಯವರಿಗೂ ಪ್ರೇರಣೆಯಾಗಲಿ ಎಂದು ಈ ಬಾರಿ ವಲಯದ ಶಿಕ್ಷಕರ ದಿನಾಚರಣೆಯನ್ನು ಶಾಸಕರ ನಿರ್ದೇಶನದಂತೆ ಇದೇ ಶಾಲೆಗೆ ಆತಿಥ್ಯ ಕೊಡಲಾಗಿದೆ.
ಅಜಿತ್ ಮನ್ನಿಕೇರಿ
ಕ್ಷೇತ್ರ ಶಿಕ್ಷಣಾಧಿಕಾರಿ, ಮೂಡಲಗಿ