ಕಣಗಲಾ(ತಾ.ಹುಕ್ಕೇರಿ): ಎಲ್ಲ ಸಮಾಜಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಸೆ.28 ರಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ನಡೆಯಲಿರುವ ನಿಮಿತ್ತ ಹುಕ್ಕೇರಿ ತಾಲೂಕಿನ ಕಣಗಲಾ ಜಿ.ಪಂ. ವ್ಯಾಪ್ತಿಯ
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವ ಸಮಾಜಗಳ ಏಳ್ಗೆಯೇ ನಮ್ಮ ಪ್ರಮುಖ ಆದ್ಯತೆ ಆಗಿದೆ ಎಂದು ತಿಳಿಸಿದರು.
ಲಿಂಗಾಯತರು, ಹಾಲುಮತ, ಉಪ್ಪಾರರು, ಮರಾಠರು, ಜೈನರು, ಪ.ಜಾ/ಪ.ಪ., ಮುಸ್ಲಿಮರು ಸೇರಿದಂತೆ ಹಲವಾರು ಜಾತಿ- ಜನಾಂಗದ ಪ್ರಮುಖರಿಗೆ ಸ್ಥಾನಮಾನ ನೀಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಈ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದೇವೆ. ಈ ಮೂಲಕ 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಾಮಾಜಿಕ ನ್ಯಾಯ ಪರಿಪಾಲನೆಗೆ ಮಹತ್ವವನ್ನು ಕೊಡುತ್ತಿರುವುದಾಗಿ ಅವರು ಹೇಳಿದರು.
ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಸಿಗಬೇಕು. ಪ್ರಧಾನಿ ನರೇಂದ್ರ ಮೋದಿಯವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಅಕ್ಷರಶಃ ಪಾಲಿಸುತ್ತಿರುವಾಗಿ ತಿಳಿಸಿದರು.
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ನಡೆಯುತ್ತಿದೆ. ಈ ತಾಲೂಕಿನ ಜನತೆಗೆ ಒಳ್ಳೆಯದನ್ನು ಮಾಡಲು ಸಚಿವ ಸತೀಶ್ ಜಾರಕಿಹೊಳಿಯವರು ಮತ್ತು ಸಹಕಾರಿ ಮುಖಂಡ ಅಣ್ಣಾಸಾಹೇಬ್ ಜೊಲ್ಲೆಯವರು ಅಭ್ಯರ್ಥಿಗಳನ್ನು ಹಾಕಿ ಪ್ರಚಾರ ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಈಡೇರಿಸುವ ಯೋಗ್ಯ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದು, ಅಂತಹ ವ್ಯಕ್ತಿಗಳನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.
ಹುಕ್ಕೇರಿ ತಾಲೂಕು ಸಮಗ್ರ ಅಭಿವೃದ್ಧಿಗೆ ಈ ಪೆನೆಲ್ನ್ನು ಬೆಂಬಲಿಸಿ ಮತ ನೀಡಿ. ಮೂರು ದಶಕಗಳಿಂದ ಏಕ ಚಕ್ರಾಧಿಪತ್ಯವನ್ನು ಹೊಂದಿರುವ ಆಡಳಿತವನ್ನು ತಿರಸ್ಕರಿಸಿ, ಜಾರಕಿಹೊಳಿ- ಜೊಲ್ಲೆಯವರ ನೇತೃತ್ವದ ಹೊಸ ಮುಖಗಳಿಗೆ ಗೆಲುವಿನ ಅವಕಾಶವನ್ನು ಮಾಡಿಕೊಡುವಂತೆ ಅವರು ಕೋರಿದರು.
ನಾವೇನೂ ಹೊರಗಿನವರಲ್ಲ. ಇದೇ ಜಿಲ್ಲೆಯವರು. ಪಕ್ಕದ ತಾಲ್ಲೂಕಿನವರು. ಆರ್ಥಿಕವಾಗಿ ದಿವಾಳಿಯಾಗಿರುವ ಸಹಕಾರಿ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಜೊಲ್ಲೆಯವರು ರೈತರಿಗೆ ಅನುಕೂಲ ಮಾಡಿ ಕೊಡುತ್ತಿದ್ದಾರೆ. ನೂರಾರು ಕೋಟಿ ರೂಪಾಯಿಗಳನ್ನು ಸುರಿದು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ
ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿಯವರು ಈ ರಾಜ್ಯದ ಮಂತ್ರಿ ಇರುವುದರಿಂದ ಅವರಿಂದಲೂ ವಿದ್ಯುತ್ ಸಂಘಕ್ಕೆ ಸಾಕಷ್ಟು ನೆರವು ಹರಿದು ಬರುತ್ತಿದೆ. ರೈತರ ಸಂಕಷ್ಟಗಳನ್ನು ನಿವಾರಿಸಲು ನಾವೆಲ್ಲರೂ ಒಂದಾಗಿದ್ದೇವೆ. ಸಹಕಾರಿ ರಂಗದಲ್ಲಿ ರಾಜಕೀಯ ಬರಬಾರದು. ನಾವುಗಳು, ಸತೀಶ್ ಅವರು ಬೇರೆಬೇರೆ ಪಕ್ಷಕ್ಕೆ ಸೇರಿದ್ದರೂ ರೈತರ ಹಿತಕ್ಕಾಗಿ ಒಂದಾಗಿ ಹುಕ್ಕೇರಿ ತಾಲೂಕಿನಲ್ಲಿರುವ ಸಹಕಾರಿ ಸಂಘಗಳನ್ನು ಪ್ರಗತಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ವಿದ್ಯುತ್ ಸಂಘವು ಲಾಭದಲ್ಲಿ ಇದ್ದರೂ ಅದನ್ನು ನಷ್ಟವೆಂಬಂತೆ ಈಗೀನ ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ಇದು ಅಮಾಯಕ ರೈತರಿಗೆ ಮಾಡುತ್ತಿರುವ ಮಹಾ ಮೋಸವೆಂದು ಟೀಕಿಸಿದರು.
ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ವಿದ್ಯುತ್ ಸಂಘದ ನಿರ್ದೇಶಕ ಸಸಿರಾಜ ಪಾಟೀಲ ಮಾತನಾಡಿ, ಕತ್ತಿ ಕುಟುಂಬದ ಸರ್ವಾಧಿಕಾರಕ್ಕೆ ಅಂತ್ಯ ಹಾಡುವಂತೆ ಕೋರಿದರು.
ಹೀರಾ ಶುಗರ್ಸ್ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ಅಮರ ನಲವಡೆ, ಬಂಡು ಅಥನೂರೆ, ಪವನ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮ ಮತ್ತು ಜಾರಕಿಹೊಳಿ ಮೈತ್ರಿಕೂಟದಿಂದ ರೈತರಿಗೆ ಲಾಭವಾಗಲಿದೆ. ನಮ್ಮ ಪೆನೆಲ್ ಬೆಂಬಲಿಸಿ ಮತ ಹಾಕಿ ಆಶೀರ್ವಾದ ಮಾಡಿದರೆ ನಾವೇ ಅಧಿಕಾರವನ್ನು ನಡೆಸುತ್ತೇವೆ. ಅವರಿಗಿಂತ ಉತ್ತಮ ರೀತಿಯಲ್ಲಿ ರೈತರ ಕೂಗಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ರೈತರಿಗಾಗಿ ನಾವುಗಳು ಕೂಡಿದ್ದೇವೆ ಹೊರತು ನಮಗೆ ಯಾವುದೇ ರೀತಿಯ ಲಾಭಕಲ್ಲ. ಇದನ್ನು ಅರ್ಥವನ್ನು ಮಾಡಿಕೊಂಡು ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿ, ನಮ್ಮ ಕೈಗಳನ್ನು ಬಲಪಡಿಸಿ ಈ ಬಾರಿ ಅಧಿಕಾರಕ್ಕೆ ತನ್ನಿ.
– ಅಣ್ಣಾಸಾಹೇಬ್ ಜೊಲ್ಲೆ
ಮಾಜಿ ಸಂಸದರು, ಚಿಕ್ಕೋಡಿ