ಮೂಡಲಗಿ: ಸತ್ಯ, ಧರ್ಮ, ಶಾಂತಿ, ಪ್ರೇಮ, ಅಹಿಂಸೆ ಇವು ಸತ್ಯಸಾಯಿ ಬಾಬಾರವರ ಜೀವನದ ಧ್ಯೇಯ ವಾಕ್ಯಗಳಾಗಿದ್ದು, ಇವುಗಳ ಮೂಲಕ ಸುಂದರ ಸಮಾಜವನ್ನು ಕಟ್ಟುವುದು ಅವರ ಕನಸಾಗಿತ್ತು. ವ್ಯಕ್ತಿಗಳ ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ಇಂತಹ ಸುಂದರ ಸಮಾಜ ಕಟ್ಟಲಿಕ್ಕೆ ಸಾಧ್ಯವಿದೆ. ಹೀಗಾಗಿ ಕಲ್ಲೋಳಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯು ಸತತ 40 ವರ್ಷಗಳ ಕಾಲ ಹಲವಾರು ವ್ಯಕ್ತಿಗಳ ಕುಟುಂಬದ ಜೀವನದಲ್ಲಿ ಪರಿವರ್ತನೆ ತರುವ ಮೂಲಕ ಸತ್ಯಸಾಯಿ ಬಾಬಾರವರ ಆಶಯಗಳನ್ನು ಜಾರಿಗೆ ತಂದಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹರ್ಷ ವಕ್ತಪಡಿಸಿದರು.
ರವಿವಾರ ಅ-12 ರಂದು ಕಲ್ಲೋಳಿ ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯ 40ನೇ ವಾರ್ಷಿಕೋತ್ಸವ ಪ್ರಯುಕ್ತ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಅವರು ಮಾತನಾಡಿದರು.
ಕಳೆದ ನಾಲ್ಕು ದಶಕಗಳಿಂದ ಕಲ್ಲೋಳಿ ಪಟ್ಟಣದ ಸಾರ್ವಜನಿಕರಿಗೆ ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಈ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದರಲ್ಲದೇ ಸಾಯಿ ಸಮಿತಿಯಿಂದ ಪಟ್ಟಣದಲ್ಲಿ ನಗರ ಸಂಕೀರ್ತನೆ, ವೇದಘೋಷ, ಭಜನೆ, ಉಪನ್ಯಾಸ. ಕಾರ್ಯಕ್ರಮ, ಧ್ಯಾನ, ಪ್ರಾಣಾಯಾಮ ತಪ್ಪದೇ ನಡೆಸಿಕೊಂಡು ಬರುವ ಮೂಲಕ ಸದ್ಭಾವ ಬೆಳೆಸುತ್ತಿದ್ದಾರೆ. ಬಾಲ ವಿಕಾಸ ತರಗತಿಗಳ ಮೂಲಕ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುತ್ತಿದ್ದಾರೆ ಎಂದು ಸಾಯಿ ಸಮಿತಿ ಕಾರ್ಯವನ್ನು ಶ್ಲಾಘೀಸಿದರು.
ಸತ್ಯಸಾಯಿ ಸೇವಾ ಕಾರ್ಯದಲ್ಲಿ ತೊಡಗಿದ ಅನೇಕರು ಒಳ್ಳೆಯ ಬದುಕು ಕಟ್ಟಿಕೊಂಡಿದ್ದಾರೆ. ಸತ್ಯಸಾಯಿ ಬಾಬಾ ಅವರ ಸೇವಾ ಸಮಿತಿ ಜಿಲ್ಲೆಯಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸತ್ಯ ಸಾಯಿ ಸಮಿತಿಯ ಜಿಲ್ಲಾ ಘಟಕ ಅಧ್ಯಕ್ಷ ವಸಂತ ಬಾಳಿಗಾ ಅಧ್ಯಕ್ಷತೆ ವಹಿಸಿದ್ದರು. ಆದರ್ಶ ಪಡಿಯಾರ ಉಪನ್ಯಾಸ ನೀಡಿದರು. ಕಲ್ಲೋಳಿ ಸತ್ಯಸಾಯಿ ಸೇವಾ ಸಮಿತಿಯ ಸುರೇಶ ಕಬ್ಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಅಧ್ಯಕ್ಷ ಶ್ರೀಶೈಲ ತುಪ್ಪದ, ಸಂಚಾಲಕ ಲೋಹಿತ ಕಲಾಲ, ಸಿ.ಎಂ ಕಟಗಿ, ಬಸವರಾಜ ಕಡಾಡಿ, ಭೀಮಶೆಪ್ಪ ಬಾಗೇವಾಡಿ, ಶ್ರೀ ಹಣಮಂತ ಖಾನಗೌಡ್ರ, ಮಹಾಂತೇಶ ಗೋರೋಶಿ, ದುಂಡಪ್ಪ ಖಾನಗೌಡ್ರ, ರಾಮಪ್ಪ ಗೋರೋಶಿ, ಸಾಯಿಕಿರಣ ಪಟ್ಟಣಶೆಟ್ಟಿ, ಮೌನೇಶ ಪತ್ತಾರ, ಪ್ರಭು ಮಳವಾಡ ಸೇರಿದಂತೆ ಮೂಡಲಗಿ, ಗೋಕಾಕ, ಚಿಕ್ಕೋಡಿ, ಬೆಳಗಾವಿ ರಾಮದುರ್ಗ, ರಾಜಾಪೂರ ಸತ್ಯಸಾಯಿ ಸಮಿತಿ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
