ಲಯನ್ಸ್ ಪರಿವಾರದಿಂದ ಅನಾಥ ಮಕ್ಕಳ ಆರೋಗ್ಯ ತಪಾಸಣೆ
ಮೂಡಲಗಿ: ‘ಮನುಷ್ಯ ಎಲ್ಲ ಯಶಸ್ಸಿಗೆ ಮತ್ತು ಸಾಧನೆಗೆ ಆತನ ಆರೋಗ್ಯ ಮುಖ್ಯವಾಗಿದ್ದು, ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವುದು ಅವಶ್ಯವಿದೆ’ ಎಂದು ಡಾ. ತಿಮ್ಮಣ್ಣ ಗಿರಡ್ಡಿ ಹೇಳಿದರು.
ಇಲ್ಲಿಯ ಹರ್ಷಾ ಸಾಂಸ್ಕøತಿಕ ಭವನದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರವು ಹುಬ್ಬಳ್ಳಿಯ ಪಯೋನಿಯರ್ಸ್ ಮಿನಿಸ್ಟ್ರೀ ಸಂಸ್ಥೆಯ ಸಹಯೋಗದಲ್ಲಿ ತಾಲ್ಲೂಕಿನ ಅನಾಥ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಹಲ್ಲು ತಪಾಸಣೆ ಮತ್ತು ಚಿಕಿತ್ಸೆ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದರು.
ದಂತ ವೈದ್ಯ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ ಮನುಷ್ಯನ ಹಲ್ಲು ಸದೃಢವಾಗಿದ್ದಷ್ಟು ಆತನ ಆರೋಗ್ಯವು ಉತ್ತಮವಾಗಿರುತ್ತದೆ. ಪ್ರತಿಯೊಬ್ಬರು ಹಲ್ಲಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಮಕ್ಕಳು ಚಾಕಲೆಟ್‍ದಂತ ತಿನಿಸುಗಳಿಂದ ದೂರವಿದ್ದು ಹಲ್ಲುಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂದರು.
ಪಯೋನಿಯರ್ಸ್ ಸಂಸ್ಥೆಯ ಮೂಡಲಗಿ ಘಟಕದ ರೆವೆರೆಂಡ್ ಸುಮಂತ ಸರ್ವಿ ಹಾಗೂ ಡಾ. ಸೋಲೊಮನ್ ಬಿಜಾ ಅವರು ಲಯನ್ಸ್ ಕ್ಲಬ್‍ನ ಸೇವೆಯನ್ನು ಶ್ಲಾಘೀಸಿದರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರವು ತಿಂಗಳದಲ್ಲಿ ಒಂದು ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣು ತಪಾಸಣೆ ಶಿಬಿರವನ್ನು ಏರ್ಪಡಿಸುತ್ತಿದ್ದು, ಜನರು ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ 25ಕ್ಕೂ ಅಧಿಕ ಮಕ್ಕಳ ಆರೋಗ್ಯ ಮತ್ತು ದಂತ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಿದರು.
ಲಯನ್ಸ್ ಅಧ್ಯಕ್ಷ ಶ್ರೀಶೈಲ್ ಲೋಕನ್ನವರ, ವೆಂಕಟೇಶ ಸೋನವಾಲಕರ, ಶಿವಾನಂದ ಗಾಡವಿ ಇದ್ದರು.