ಮೂಡಲಗಿ: ದೆಹಲಿಯ ಗಡಿಯಲ್ಲಿ ನಿರಂತವಾಗಿ ಏಳು ತಿಂಗಳಿಂದ ರೈತ ವಿರೋಧಿ ಕೃಷಿ ಕಾನೂನುಗಳನ್ನು ರದ್ದಪಡಿಸುವ ಹಿನ್ನೆಲೆ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೂಡಲಗಿ ತಾಲೂಕಾ ಸಂಘಟನೆಯಿಂದ “ಕೃಷಿಯನ್ನು ಉಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಿ” ಎಂಬ ಮನವಿ ಪತ್ರವನ್ನು ಮೂಡಲಗಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಂಗಡಿ ಮಾತನಾಡಿ, ಮೋದಿ ಸರ್ಕಾರ ಅನ್ನದಾತರ ಪರವಾಗಿದೆ ಎಂದು ಹೇಳುವ ಮೋದಿಯವರು, ಕಳೆದ ಏಳು ತಿಂಗಳಿಂದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗಿಯಾದ ರೈತರಿಲ್ಲಿ 502ಕ್ಕಿಂತ ಹೆಚ್ಚಗೆ ರೈತರು ಸಾವನ್ನಪ್ಪಿದರೂ ಕೇಂದ್ರ ಸರ್ಕಾರ ಯಾವದೇ ರೀತಿ ಸ್ಪಂದನೆ ನೀಡದೆ ಪ್ರಜಾಪ್ರಭುತ್ವದ ತತ್ವಗಳನ್ನು ಹಾಗೂ ನಿಯಮಗಳನ್ನು ಮೀರಿ ರೈತರ ಹೋರಾಟವನ್ನು ನಾಶ ಮಾಡಲು ತಂತ್ರಗಳನ್ನು ರೂಪಿಸುತ್ತಿದ್ದಾರೆ ಆದರಿಂದ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ರೈತ ವಿರೋಧಿ ಕಾನುನೂಗಳನ್ನು ರದ್ದುಪಡಿಸಿ, “ಕೃಷಿಯನ್ನು ಉಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಿ” ಎಂದು ಆಗ್ರಹಿಸಿದರು.
ಕಳೆದ ಒಂದು ವರ್ಷದಿಂದ ಮಹಾಮಾರಿ ಕೊರೋನಾ ಹಿನ್ನೆಲೆ ಲಾಕ್‍ಡೌನದಿಂದ ಜನ ಸಾಮಾನ್ಯರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ, ಹೀಗಿರುವಾಗ ಒಂದೊಂದೇ ವಸ್ತುಗಳ ಬೆಲೆ ಏರಿಕೆಯಾಗತೊಡಗಿದ್ದು ಹಾಗೂ ರಾಜ್ಯದ ಪ್ರಮುಖ ರಸಗೊಬ್ಬರ ಕಂಪನಿಗಳು ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ನೆಪವಾಗಿಟ್ಟುಕೊಂಡು ಬೆಲೆ ಏರಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ರೈತರ ಪಾಲಿಗೆ ನಂಗಲಾರದ ತುತ್ತಾಗಿ ಪರಿಗಣಿಸಿದೆ. ರಾಷ್ಟ್ರಪತಿಗಳು ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಮಾರ್ಗದರ್ಶನ ನೀಡುವಂತೆ ರಾಷ್ಟ್ರಪತಿಗಳಿಗೆ ಒತ್ತಾಯಿಸಿದರು.
ಸಂಘಟನೆಯ ಮೂಡಲಗಿ ತಾಲೂಕಾಧ್ಯಕ್ಷ ವೀರಣ್ಣ ಸಸಾಲಟ್ಟಿ ಮಾತನಾಡಿ, ಕೂಡಲೇ ಕೇಂದ್ರ ಸರ್ಕಾರ ರೈತ ವಿರೋಧಿ ಕಾನುನೂಗಳನ್ನು ರದ್ದುಪಡಿಸಬೇಕು ಹಾಗೂ ಬೆಲೆ ಇಳಿಕೆ ಮಾಡಿ, ಜನ ಸಾಮಾನ್ಯರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮೂಡಲಗಿ ಉಪಾಧ್ಯಕ್ಷ ಗುರುನಾಥ ಹುಕ್ಕೇರಿ, ರಾಜ್ಯ ಸಂಚಾಲಕ ಮಂಜು ಗದಾಡಿ, ಕುಮಾರ ಮರ್ದಿ, ರವೀಂದ್ರ ನುಚ್ಚುಂಡಿ, ಪ್ರಕಾಶ ತೇರದಾಳ, ಸಿದ್ದಪ್ಪ ಅಂಗಡಿ, ಶಿವಲಿಂಗ ಮೂಲಿಮನಿ, ಕಲ್ಲಪ್ಪ ಹುಲಕುಂದ ಉಪಸ್ಥಿತರಿದ್ದರು.