ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನೆ
ಪಂಚಮಸಾಲಿ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವೆ, ಒಡೆಯುವ ಕೆಲಸ ಅಲ್ಲ
ಮೂಡಲಗಿ: ‘ಲಿಂಗಾಯತ ಪಂಚಮಸಾಲಿ ಸಂಘಟನೆಗೆ ಟೀಕೆ, ಅಡ್ಡಿಗಳು ಬಂದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುವುದು ನಮ್ಮ ಗುರಿಯಾಗಿದೆ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದರು.
ಜಮಖಂಡಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪರ್ಯಾಯ ಪೀಠ ರಚನೆಯ ಪ್ರಕ್ರಿಯೆ ನಡೆದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾತನಾಡಿದ ಅವರು ಪರ್ಯಾಯ ಪೀಠ, ಸಂಘಟನೆಯ ಬಗ್ಗೆ ಟೀಕಿಸುವುದು, ಪ್ರತಿಕ್ರಿಯೆ ನೀಡುವುದು ಅವಶ್ಯವಿಲ್ಲ ಎಂದರು.
ಪಂಚಮಸಾಲಿ ಸಂಘಟನೆಯ ಪರ್ಯಾಯ ಸಂಘಟನೆಯನ್ನು ತಿರಸ್ಕರಿಸುವುದಾಗಲಿ, ಪುರಸ್ಕರಿಸುವುದಾಗಲಿ ನಾನು ಮಾಡುವುದಿಲ್ಲ. ಒಳ್ಳೆಯ ಕೆಲಸ ಮಾಡುವಲ್ಲಿ ಅಪಸ್ವರ, ಒಡಯುವ ತಂತ್ರಗಳು ಸಾಮಾನ್ಯವಾದದ್ದು. ನಮ್ಮ ಸಂಘಟನೆಯು ಸಮಾಜ ಕಟ್ಟುವ ಕೆಲಸವಾಗಿದೆ ಒಡೆಯುವ ಕೆಲಸ ಅಲ್ಲ ಎಂದರು.
ಲಿಂಗಾಯತ ಪಂಚಮಸಾಲಿ ಪೀಠದ ಮೂಲಕ 2ಎ ಮೀಸಲಾತಿ ಪಡೆಯುವ ಸಲುವಾಗಿ ಲಕ್ಷಾಂತರ ಪಂಚಮಸಾಲಿ ಜನರೊಂದಿಗೆ 39 ದಿನಗಳ ಬೆಂಗಳೂರು ವರೆಗೆ ಪಾದಯಾತ್ರೆ ಜೊತೆಗೆ ಹೋರಾಟ ಮಾಡಲಾಗಿದೆ. ಮೀಸಲಾತಿ ನೀಡುವ ಸಲುವಾಗಿ ಸರ್ಕಾರಕ್ಕೆ 6 ತಿಂಗಳ ಗಡುವು ನೀಡಿದ್ದು ಸರ್ಕಾರವು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪ್ರಕಟಿಸುವ ಭರವಸೆ ನಮಗಿದೆ ಎಂದರು.
ಪಾದಯಾತ್ರೆಯ ಮೂಲಕ ಹೋರಾಟವು ಹಳ್ಳಿಯಿಂದ ಹಿಡಿದು ರಾಷ್ಟ್ರಮಟ್ಟದ ವರೆಗೆ ಪಂಚಮಸಾಲಿ ಸಮಾಜದ ಬಗ್ಗೆ ಜಾಗೃತಿ ಮೂಡಿದೆ. ನಮ್ಮ ಹೋರಾಟವು ಮಠಮಾನ್ಯ ಕಟ್ಟುವುದಕ್ಕಾಗಿ ಅಲ್ಲ ಸಮಾಜ ಕಟ್ಟುವುದಕ್ಕಾಗಿ ಇದೆ. ನಿಸ್ವಾರ್ಥದ ಹೋರಾಟಕ್ಕೆ ಯಾವತ್ತು ಜಯ ದೊರೆಯುತ್ತದೆ ಎನ್ನುವುದಕ್ಕೆ ಈ ನೆಲದ ವೈಶಿಷ್ಟಯವಾಗಿದೆ ಎಂದರು.
ಪರ್ಯಾಯ ಸಂಘಟನೆಗೆ ಪಂಚಮಸಾಲಿ ಸಮಾಜದ ಜನರು ಗೊಂದಲಕ್ಕೆ ಒಳಗಾಗಿಲ್ಲ. ಸಮಾಜದ ಸಲುವಾಗಿ ಯಾರು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದಾರೆ ಅವರೊಂದಿಗೆ ಸಮಾಜದ ಜನರು ಇದ್ದೆ ಇರುತ್ತಾರೆ. ಹೀಗಾಗಿ ಮೀಸಲಾತಿಗಾಗಿ ನನ್ನ ಹೋರಾಟವು ಅಚಲವಾಗಿದೆ. 2021ರಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಖಂಡಿತಾಗಿ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.