ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸಿ, ಲಸಿಕೆ ಅಭಿಯಾನ ಯಶಸ್ವಿಗೊಳಿಸಿ
ಸಂಭಾವ್ಯ ಮೂರನೇ ಅಲೆ ಸಮರ್ಥವಾಗಿ ಎದುರಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಗೋಕಾಕ ಹಾಗೂ ಮೂಡಲಗಿ ತಾಲೂಕಿನ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರದಂದು ಇಲ್ಲಿನ ತಹಶೀಲ್ದಾರ ಕಛೇರಿಯಲ್ಲಿ ಮೂಡಲಗಿ ಹಾಗೂ ಗೋಕಾಕ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಸಿಕೆ ಅಭಿಯಾನವನ್ನು ಈಗಾಗಲೇ ನಡೆಸಲಾಗುತ್ತಿದ್ದು, ಆರೋಗ್ಯ ಇಲಾಖೆಯ ಜೊತೆಗೆ ಎಲ್ಲ ಇಲಾಖೆಗಳು ಕೈಜೋಡಿಸಿ ಲಸಿಕೆ ಅಭಿಯಾನವನ್ನು ಯಶಸ್ವಿ ಮಾಡುವಂತೆ ಸೂಚಿಸಿದರು.
ಈಗಾಗಲೇ ಉಭಯ ತಾಲೂಕಿನಾದ್ಯಂತ 1.20 ಲಕ್ಷ ಲಸಿಕೆಗಳನ್ನು ಹಾಕಿಸಿದ್ದು, ಒಟ್ಟಾರೆ 1.59 ಲಕ್ಷ ಲಸಿಕೆ ಗುರಿಯನ್ನು ಹೊಂದಲಾಗಿದೆ. ಲಸಿಕೆ ಪಡೆಯದೇ ಇರುವವರನ್ನು ಲಸಿಕಾ ಕೇಂದ್ರಕ್ಕೆ ಕರೆದುಕೊಂಡು ಅವರಿಗೆ ಲಸಿಕೆ ಹಾಕಿಸಬೇಕು. ಎಲ್ಲ ಗ್ರಾಮಗಳಲ್ಲಿ ಲಸಿಕೆ ಕುರಿತು ಜಾಗೃತಿ ಮೂಡಿಸಬೇಕು. ಎಲ್ಲ ಅಧಿಕಾರಿಗಳು ಸಹ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಲಸಿಕೆ ಅಭಿಯಾನವನ್ನು 100ಕ್ಕೆ ನೂರರಷ್ಟು ಯಶಸ್ವಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ಮೂರನೇ ಅಲೆ ಬಗ್ಗೆ ಈಗಾಗಲೇ ಸಾಕಷ್ಟು ತಜ್ಞರು ಅಭಿಪ್ರಾಯಗಳನ್ನು ಮಂಡಿಸಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸಲಿಕ್ಕೆ ಅಧಿಕಾರಿಗಳು ಕಾರ್ಯಸನ್ನದ್ಧರಾಗಬೇಕು. ಮೂರನೇ ಅಲೆ ಅಪ್ಪಳಿಸಿದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ನಿಯಂತ್ರಣವನ್ನು ಮಾಡಲು ಎಲ್ಲ ಅಧಿಕಾರಿಗಳು ಕೂಡಿಕೊಂಡು ಕೆಲಸ ನಿರ್ವಹಿಸುವಂತೆ ಹೇಳಿದರು.
ಪ್ರಗತಿಯಲ್ಲಿರುವ ಮತ್ತು ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಸ್ವತಃ ಅಧಿಕಾರಿಗಳಿಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು. ಬಹುತೇಕ ರಸ್ತೆಗಳು ತೀರಾ ಹದಗೆಟ್ಟಿದ್ದು ಕೂಡಲೇ ಇವುಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗಾಗಿ ಅಗತ್ಯ ಕ್ರಮ ಕೈಗೊಂಡು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅರಭಾವಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಹಾಗೂ ಕ್ಷೇತ್ರದಲ್ಲಿ ಗಾಯರಾಣ ಜಾಗೆಯಲ್ಲಿರುವ ಸಾರ್ವಜನಿಕರು ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಕೂಡಲೇ ಇದನ್ನು ಇತ್ಯರ್ಥಗೊಳಿಸಬೇಕು. ಭೂ ಮಾಪನಾ ಇಲಾಖೆಯಿಂದ ಬಾಕಿ ಉಳಿದಿರುವ ಸರ್ವೇ ಕಾರ್ಯವನ್ನು ವೇಗದಲ್ಲಿ ಮಾಡಬೇಕು. ರೈತರಿಗೆ ತೊಂದರೆಯಾಗದಂತೆ ಸ್ಪಂದಿಸಬೇಕು. ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡುವಂತೆ ಸೂಚಿಸಿದರು.
ಈಗಾಗಲೇ ಪ್ರಗತಿಯಲ್ಲಿರುವ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳಿಸಬೇಕು. ರೈತ ಸಮುದಾಯಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಬೇಕು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿದ್ದು, ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಲಾಗುವುದು. ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು. ಅಧಿಕಾರಿಗಳು ಶರವೇಗದಲ್ಲಿ ತಮ್ಮ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುದೀಪ ಚೌಗುಲೆ, ತಾಲೂಕಾ ಆರೋಗ್ಯಾಧಿಕಾರಿ ಡಾ: ಮುತ್ತಣ್ಣ ಕೊಪ್ಪದ, ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.