ಕುಲಗೋಡ ಪಿಎಚ್‍ಸಿ ದುರಸ್ತಿಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ
ಕುಲಗೋಡದಲ್ಲಿ ನಾಡಕಛೇರಿ ಮಂಜೂರಾತಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವೆ : ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಕ್ಷೇತ್ರದ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ದುರಸ್ತಿಯಲ್ಲಿದ್ದು, ಅವುಗಳಿಗೆ ನವೀಕೃತ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುವುದು. ರೋಗಿಗಳ ಆರೈಕೆಯ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇತ್ತೀಚೆಗೆ ತಾಲೂಕಿನ ಕುಲಗೋಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಹೊಸ ಕಟ್ಟಡಗಳಿಗೆ ಅನುದಾನ ಬಿಡುಗಡೆಯಾಗಲು ಸ್ವಲ್ಪ ಮಟ್ಟಿಗೆ ವಿಳಂಬವಾಗುತ್ತಿರುವುದರಿಂದ ಕುಲಗೋಡ ಆಸ್ಪತ್ರೆ ಸೇರಿ ಎಲ್ಲ ಪಿಎಚ್‍ಸಿ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ತಗಲುವ ವೆಚ್ಚವನ್ನು ಸ್ವತಃ ನಾನೇ ಭರಿಸುತ್ತಿದ್ದೇನೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಧಿಕ ಬಿಲ್‍ಗಳನ್ನು ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೋನಾ ಸಂದರ್ಭದಲ್ಲಿ ಅಂಬ್ಯುಲೆನ್ಸ್‍ಗಳು ಜನ ಸಾಮಾನ್ಯರಿಗೆ ಹೊರೆಯಾಗಿ ಕೇವಲ 5-10 ಕಿ.ಮೀ ವರೆಗಿನ ಗ್ರಾಮಗಳಿಗೆ ಕರೆದೊಯ್ಯಲು ಅಪಾರ ಪ್ರಮಾಣದಲ್ಲಿ ಹಣವನ್ನು ಪಡೆಯುತ್ತಿದ್ದಾರೆ. ರೋಗಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್ಲ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತುರ್ತು ಸೇವೆ ಸಂದರ್ಭದಲ್ಲಿ ಅಂಬ್ಯುಲೆನ್ಸ್‍ಗಳನ್ನು ನೀಡಲಾಗಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ತಿಳಿಸಿದರು.
ಮೂಡಲಗಿ ಹೊಸ ತಾಲೂಕಿಗೆ ನಾಡ ಕಛೇರಿ ಆರಂಭಿಸಲು ಈಗಾಗಲೇ ಬೇಡಿಕೆಗಳು ಬಂದಿವೆ. ಕುಲಗೋಡ ಗ್ರಾಮಸ್ಥರು ಸಹ ನಾಡ ಕಛೇರಿಗಾಗಿ ಬೇಡಿಕೆ ಇಟ್ಟಿದ್ದಾರೆ. ಇದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆಯಿತ್ತರು.
ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಗ್ರಾಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ, ಪಿಕೆಪಿಎಸ್ ಅಧ್ಯಕ್ಷ ವೆಂಕಣ್ಣ ಚನ್ನಾಳ, ಸುನೀಲ ಒಂಟಗೋಡಿ, ಶ್ರೀಪತಿ ಗಣಿ, ಪುಟ್ಟಣ್ಣ ಪೂಜೇರಿ, ದತ್ತು ಕುಲಕರ್ಣಿ, ಎಚ್.ಕೆ. ಚನ್ನಾಳ, ಸುಶೀಲಾ ಮಳಲಿ, ಪಿಎಚ್‍ಸಿ ವೈದ್ಯಾಧಿಕಾರಿ ಡಾ. ಹೊರಟ್ಟಿ ಮುಂತಾದವರು ಉಪಸ್ಥಿತರಿದ್ದರು.