ಮೂಡಲಗಿ ವಲಯ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಪೂರ್ಣ ಸಿದ್ದ
ಮೂಡಲಗಿ: ‘ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಾಗಿ ನಿಯೋಜನೆಗೊಂಡಿರುವ 35 ಪರೀಕ್ಷಾ ಕೇಂದ್ರಗಳು ಇಲಾಖೆಯ ಮಾರ್ಗಸೂಚಿಯಂತೆ ಪೂರ್ಣವಾಗಿ ಸಿದ್ದಗೊಂಡಿವೆ’ ಎಂದು ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪದನಿಮಿತ್ತ ಸಹ ನಿರ್ದೇಶಕ ರಾಜೀವ ವಿ. ನಾಯ್ಕ ಹೇಳಿದರು.
ತಾಲ್ಲೂಕಿನ ಗುರ್ಲಾಪುರ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಸಿದ್ದತೆಯನ್ನು ಪರಿಶೀಲಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಭಯಬಿಟ್ಟು ಪರೀಕ್ಷೆಗೆ ಹಾಜರಾಗುವ ರೀತಿಯಲ್ಲಿ ಕೇಂದ್ರಗಳನ್ನು ಸಿದ್ದಗೊಳಿಸಿದ್ದು ಮತ್ತು ನೂರಕ್ಕೆ ನೂರರಷ್ಟು ಹಾಜರಾತಿಯಾಗುವಂತೆ ಎಲ್ಲ ಏರ್ಪಾಡು ಆಗಿದೆ ಎಂದರು.
ಕೋವಿಡ್ ಹರಡದಂತೆ ಪ್ರತಿಯೊಂದು ಕೇಂದ್ರಗಳಲ್ಲಿ ಎಲ್ಲ ಮುಂಜಾಗೃತ ಕ್ರಮವನ್ನು ತೆಗೆದುಕೊಂಡಿರುವರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ ಅವರು ಸಿದ್ದತೆಯ ಬಗ್ಗೆ ಬಹಳಷ್ಟು ಮುತುವರ್ಜಿಯನ್ನು ವಹಿಸಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಮಾತನಾಡಿ ಮೂಡಲಗಿ ವಲಯ ವ್ಯಾಪ್ತಿಯಲ್ಲಿ ಒಟ್ಟು 75 ಪ್ರೌಢ ಶಾಲೆಗಳಿಂದ 6751 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿರುವರು. 35 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದರು.
ಪರೀಕ್ಷಾ ಕೇಂದ್ರಗಳು ಕೋವಿಡ್ ನಿಯಮಗಳ ಪಾಲನೆ ಹಾಗೂ ಶಿಕ್ಷಣ ಇಲಾಖೆಯ ಮಾರ್ಗಸೂಚಿಯು ಪಾಲನೆಯಾಗಿದ್ದರ ಬಗ್ಗೆ ನೇಮಿಸಿದ್ದ ಬಿಆರ್‍ಪಿ, ಸಿಆರ್‍ಪಿ, ದೈಹಿಕ ಶಿಕ್ಷಣಾಧಿಕಾರಿಗಳ ತಂಡವು ಪ್ರತಿ ಕೇಂದ್ರಕ್ಕೆ ಭೇಟ್ಟಿ ನೀಡಿ ಪರಿಶೀಲನೆ ಮಾಡಿರುವರು. ಎಲ್ಲ ಕೇಂದ್ರಗಳು ಸರ್ವಸಿದ್ದತೆಯನ್ನು ಮಾಡಿಕೊಂಡಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಲಾಗಿದೆ ಎಂದರು.
ಮುಖ್ಯೋಪಾಧ್ಯಾಪಕಿ ಗೀತಾ ಕರಗಣ್ಣಿ, ಸಿಆರ್‍ಪಿ ಸಿದ್ರಾಮ್ ದ್ಯಾಗಾನಟ್ಟಿ, ಶಾಲಾ ಸಿಬ್ಬಂದಿ ಇದ್ದರು.