ರೈತ ಕಲ್ಯಾಣ ಸಂಘದಿಂದ ಮೃತಪಟ್ಟ ಕುಟುಂಬಗಳಿಗೆ ವಾರಸುದಾರರಿಗೆ ಸಹಾಯಧನ ಚೆಕ್ ವಿತರಣೆ
ಗೋಕಾಕ-ಮೂಡಲಗಿ ತಾಲೂಕುಗಳಲ್ಲಿ 7 ಹಾಲು ಶಿಥಿಲೀಕರಣ ಘಟಕಗಳು ಇಷ್ಟರಲ್ಲಿಯೇ ಆರಂಭ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಪೂರೈಸುತ್ತಿರುವ ರೈತ ಕಲ್ಯಾಣ ಸಂಘದ ಸದಸ್ಯರುಗಳ 16 ವಾರಸುದಾರರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇತ್ತೀಚೆಗೆ ತಲಾ 10 ಸಾವಿರ ರೂ.ಗಳ ಸಹಾಯಧನದ ಚೆಕ್‍ಗಳನ್ನು ವಿತರಿಸಿದರು.
ಹಾಲು ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿರುವ 16 ಜನರು ಮೃತಪಟ್ಟಿದ್ದರಿಂದ ಅವರ ಕುಟುಂಬಗಳ ವಾರಸುದಾರರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಚೆಕ್‍ಗಳನ್ನು ವಿತರಿಸಿದರು. ಜೊತೆಗೆ ಗುರ್ಲಾಪೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಸಿಬ್ಬಂದಿಯೋರ್ವ ನಿವೃತ್ತಿಯಾದ ಪ್ರಯುಕ್ತ ಅವರಿಗೆ 25 ಸಾವಿರ ರೂ.ಗಳ ಚೆಕ್‍ನ್ನು ಇದೇ ಸಂದರ್ಭದಲ್ಲಿ ಸಹಾಯಧನ ರೂಪದಲ್ಲಿ ವಿತರಿಸಿದರು.
ಅಲ್ಲದೇ ಬೆಳಗಾವಿ ಹಾಲು ಒಕ್ಕೂಟದ ರೈತರಿಗೆ ಮೇವಿನ ಜೋಳದ ಬೀಜಗಳನ್ನು ಸಹ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ರೈತರಿಂದಲೇ ಹಾಲು ಒಕ್ಕೂಟವು ಪ್ರಗತಿಪಥದತ್ತ ಸಾಗುತ್ತಿದೆ. ರೈತರು ಹಾಗೂ ಗ್ರಾಹಕರ ಪ್ರೋತ್ಸಾಹ ನಮಗೆ ನಿರಂತರವಾಗಿ ಸಿಗುತ್ತಿದೆ. ಇಂದು ಕೆಎಂಎಫ್ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದರೆ ಅದಕ್ಕೆ ರೈತರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕೆಎಂಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ಹಳ್ಳೂರ ಮತ್ತು ಶಿಂಧಿಕುರಬೇಟ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ 3000 ಲೀಟರ್ ಸಾಮಥ್ರ್ಯದ ಹಾಲು ಶಿಥಿಲೀಕರಣ ಘಟಕಗಳು ಹಾಗೂ ಶಿವಾಪೂರ(ಹ), ಢವಳೇಶ್ವರ, ವೆಂಕಟಾಪೂರ, ಬಳೋಬಾಳ, ಖಾನಾಪೂರ(ನಂದಗಾಂವ) ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ತಲಾ 2000 ಲೀಟರ್ ಸಾಮಥ್ರ್ಯದ ಹಾಲು ಶಿಥಿಲೀಕರಣ ಘಟಕಗಳು ಇಷ್ಟರಲ್ಲಿಯೇ ಆರಂಭಗೊಳ್ಳಲಿವೆ. ಈಗಾಗಲೇ ಇವುಗಳ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಂ.ಬಿ. ಪಾಟೀಲ, ಗೋಕಾಕ ಉಪಕೇಂದ್ರದ ವಿಸ್ತರ್ಣಾಧಿಕಾರಿಗಳಾದ ಎಸ್.ಬಿ. ಕರಬನ್ನವರ, ರವಿ ತಳವಾರ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.