ಕೋವಿಡ್‍ದಿಂದ ರಕ್ಷಣೆಗಾಗಿ ಮಕ್ಕಳಿಗೆ ಲಸಿಕೆ ಅವಶ್ಯ
ಮೂಡಲಗಿ: ‘ಕೋವಿಡ್ ಸೋಂಕು ಬಾಧಿಸದಂತೆ ಮಕ್ಕಳ ರಕ್ಷಣೆಗಾಗಿ ಲಸಿಕೆ ಹಾಕಿಸುವುದು ಅವಶ್ಯವಿದೆ’ ಎಂದು ಚಿಕ್ಕ ಮಕ್ಕಳ ತಜ್ಞ ಡಾ. ಮನೋಹರ ವಿ. ಹೇಳಿದರು.
ಇಲ್ಲಿಯ ಶ್ರೀ ಶಿವಬೋಧರಂಗ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜು ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಕೋವಿಡ್‍ದಿಂದ ರಕ್ಷಣೆಯ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವನ್ನು ಮಗುವಿಗೆ ಲಸಿಕೆಯ ಚುಚ್ಚುಮದ್ದು ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು 6 ತಿಂಗಳ ಮಗುವಿನಿಂದ ಹಿಡಿದು 12 ವರ್ಷಗಳ ಮಕ್ಕಳಿಗೆ ಲಸಿಕೆ ಚುಚ್ಚುಮದ್ದನ್ನು ನೀಡಲಾಗುವುದು ಎಂದರು.
ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ ಬಾಧಿಸದಂತೆ ಲಸಿಕೆಯು ರಕ್ಷಣೆ ನೀಡುತ್ತಿದ್ದು, ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಮಕ್ಕಳು ಸಮರ್ಥರಾಗುತ್ತಾರೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ರಿಯಾಯಿತಿ ದರದಲ್ಲಿ ಲಸಿಕೆ ನೀಡುತ್ತಿರುವುದರಿಂದ ಮೂಡಲಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಈ ಲಸಿಕೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಹಾಗೂ ಡಾ. ಎಸ್.ಎಸ್. ಪಾಟೀಲ ಮಾತನಾಡಿ ಕೋವಿಡ್ ಸೋಂಕು ಬಗ್ಗೆ ನಿರ್ಲಕ್ಷತೆ ಮಾಡದೆ ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಖಜಾಂಚಿ ಸುಪ್ರೀತ ಸೋನವಾಲಕರ ಪ್ರಾಸ್ತಾವಿಕ ಮಾತನಾಡಿದರು.
ಮಹಾಂತೇಶ ಹೊಸೂರ, ಶ್ರೀಶೈಲ್ ಲೋಕನ್ನವರ, ವರ್ಧಮಾನ ಜರಾಳೆ ಇದ್ದರು.