ಲಯನ್ಸ್ ಕ್ಲಬ್‍ದಿಂದ ಆಸ್ಪತ್ರೆಯಲ್ಲಿ ಅನ್ನದಾಸೋಹ
‘ಅನ್ನದಾನವು ಶ್ರೇಷ್ಠ ದಾನವಾಗಿದೆ’
ಮೂಡಲಗಿ: ‘ಅನ್ನ ದಾನವು ಎಲ್ಲ ದಾನಕ್ಕಿಂತ ಶ್ರೇಷ್ಠ ದಾನವಾಗಿದೆ’ ಎಂದು ತಹಶೀಲ್ದಾರ್ ಡಿ.ಜಿ. ಮಹಾತ್ ಅವರು ಹೇಳಿದರು.
ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರದವರು ಏರ್ಪಡಿಸಿದ್ದ 66ನೇ ಪಾಕ್ಷಿಕ ಅನ್ನದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಸಿದವರಿಗೆ ಅನ್ನವನ್ನು ನೀಡುವುದು ಸಮಾಜದ ಶ್ರೇಷ್ಠ ಮೌಲ್ಯವಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ ಆಹಾರ ನೀಡುವ ಮೂಲಕ ಮೂಡಲಗಿ ಲಯನ್ಸ್ ಕ್ಲಬ್‍ವು ಶ್ಲಾಘನೀಯ ಕಾರ್ಯ ಮಾಡುತ್ತಲಿದೆ ಎಂದರು.
ಅತಿಥಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಮಾತನಾಡಿ ಕಳೆದ ಎರಡುವರೆ ವರ್ಷಗಳಿಂದ ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್‍ವು ಅನ್ನದಾಸೋಹವನ್ನು ಮಾಡುತ್ತಿದ್ದು, ಇದು ಉತ್ತಮ ಕಾರ್ಯವಾಗಿದೆ ಎಂದು ಪ್ರಶಂಸಿದರು.
ಅಧ್ಯಕ್ಷತವಹಿಸಿದ್ದ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ತಿಂಗಳದಲ್ಲಿ ಎರಡು ಬಾರಿ ಅನ್ನದಾಸೋಹವನ್ನು ಏರ್ಪಡಿಸಲಾಗುತ್ತಿದೆ. ಲಯನ್ಸ್ ಕ್ಲಬ್ ಸದಸ್ಯರು ಇಲ್ಲವೆ ದಾನಿಗಳಿಂದ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ ಎಂದರು.
ದಾಸೋಹಿಯಾಗಿರುವ ವೆಂಕಟೇಶ ಆರ್. ಸೋನವಾಲಕರ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಿದರು.
ಡಾ. ಜಗದೀಶ ಜಿಂಗಿ, ಡಾ. ಬಿಲಖೀಶ ಖಾಜಿ, ಆಸ್ಪತ್ರೆ ಅಧೀಕ್ಷಕ ಎಂ.ಎ. ಇಂಚಲಮಠ, ಶಿವಲಿಂಗ ಪಾಟೀಲ, ಚೇತನ ನಿಶಾನಿಮಠ, ಲಯನ್ಸ್ ಕ್ಲಬ್ ಸದಸ್ಯರಾದ ಮಹಾಂತೇಶ ಹೊಸೂರ, ಸಂಜಯ ಮೋಕಾಶಿ, ಶ್ರೀಶೈಲ್ ಲೋಕನ್ನವರ, ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ ಇದ್ದರು.
300ಕ್ಕೂ ಅಧಿಕ ಜನರು ಅನ್ನದಾಸೋಹದಲ್ಲಿ ಭಾಗಿಯಾಗಿದ್ದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿದರು, ಖಜಾಂಚಿ ಸುಪ್ರೀತ ಸೋನವಾಲಕರ ವಂದಿಸಿದರು.