ತುಕ್ಕಾನಟ್ಟಿ ಗ್ರಾಮದಲ್ಲಿ ಗೋವಿನ ಜೋಳದ ಕ್ಷೇತ್ರೋತ್ಸವ
ಮೂಡಲಗಿ: ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಂಡು ತಮ್ಮ ಆರೋಗ್ಯದೊಂದಿಗೆ ಸಮಾಜದ ಆರೋಗ್ಯವನ್ನು ಕಾಯ್ದುಕೊಳ್ಳಬೇಕು’ ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬಿ. ಬೆಳಕೂಡ ಹೇಳಿದರು.
ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ರೈತ ಮಹಿಳೆ ಆಶಾ ಭರತ ಮಹಾತ್ರೆ ಅವರ ತೋಟದಲ್ಲಿ ತಾಲ್ಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆ ಇವರ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಗೋವಿನ ಜೋಳ ಕ್ಷೇತ್ರೋತ್ಸವ ಹಾಗೂ ರೈತರ ಗೋಷ್ಠಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಭೂಮಿಯಲ್ಲಿ ನೀರನ್ನು ಇತಿಮಿತಿಯಲ್ಲಿ ಬಳಸಿ ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಅಧಿಕ ಇಳುವರಿಯನ್ನು ಪಡೆದುಕೊಳ್ಳಬೇಕು ಎಂದರು.
ಅತೀಯಾದ ರಸಾಯನಿಕ ಗೊಬ್ಬರವನ್ನು ಬಳಸುವ ಮೂಲಕ ರೋಗ ರುಜೀನಗಳಿಗೆ ದಾರಿಮಾಡಿಕೊಟ್ಟಂತೆಯಾಗುವುದು. ಬೆಳೆಗಳಿಗೆ ತಿಪ್ಪೆಗೊಬ್ಬರವನ್ನು ಅಧಿಕ ಬಳಸುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಗೋವಿನಜೋಳದ ವಿವಿಧ ತಳಿಗಳ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿ ಗೋಕಾಕ ಕೃಷಿ ಇಲಾಖೆಯ ಕೃಷಿ ಸಹಾಯಕ ನಿರ್ದೇಶಕ ಎಂ.ಎಂ. ನದಾಫ್ ಮಾತನಾಡಿ ರೈತರು ಸಮಗ್ರ ಕೃಷಿಯನ್ನು ಅನುಸರಿಸಿಕೊಂಡು ತಮಗೆ ಲಭ್ಯವಿರುವ ಭೂಮಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಬಿತ್ತನೆ ಪೂರ್ವದಲ್ಲಿ ಮಣ್ಣಿನ ಪರೀಕ್ಷೆ ಮಹತ್ವವಾಗಿದೆ, ನ್ಯಾನೋ ಯುರಿಯಾವನ್ನು ಬಳಸುವ ಮೂಲಕ ಉತ್ತಮ ಇಳುವರಿಯನ್ನು ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಅಶೋಕ ಗದಾಡಿ ಪ್ರಾಸ್ತಾವಿಕ ಮಾತನಾಡಿ ಕೃಷಿಯಲ್ಲಿ ಹೊಸ ತಂತ್ರಜ್ಞನಗಳು ಬಂದಿದ್ದು ಅವುಗಳನ್ನು ಬಳಸಿಕೊಂಡು ಕೃಷಿಯಲ್ಲಿ ಮುಂದೆ ಬರಬೇಕು. ಕೃಷಿಕ ಸಮಾಜವು ರೈತರ ಪ್ರಗತಿಗೆ ಎಲ್ಲ ರೀತಿಯಿಂದ ಸಹಾಯ, ಸಹಕಾರವನ್ನು ನೀಡುತ್ತದೆ ಎಂದರು.
ಕೃಷಿ ತಜ್ಞರಾದ ತುಕ್ಕಾನಟ್ಟಿಯ ಡಾ. ಡಿ.ಸಿ. ಚೌಗಲಾ ಹಾಗೂ ಡಾ. ಮಾರುತಿ ಮಳವಾಡ ಅವರು ಗೋವಿನ ಜೋಳದ ಬೆಳೆಯ ವಿವಿಧ ತಳಿಗಳ ಕುರಿತು, ಕೀಟ ನಿವಾರಣೆ, ಅಧಿಕ ಇಳುವರಿ ಪಡೆಯುವ ಬಗೆಯನ್ನು ರೈತರಿಗೆ ವಿವರಿಸಿದರು.
ಗ್ರಮ ಪಂಚಾಯ್ತಿ ಅಧ್ಯಕ್ಷ ಕುಮಾರ ಮರ್ದಿ ಅಧ್ಯಕ್ಷತವಹಿಸಿದ್ದರು.
ಆಶಾ ಮಹಾತ್ರೆ, ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ಕಾರ್ಯದರ್ಶಿ ಎ.ಜಿ. ಮಳವಾಡ, ಅರಭಾವಿ ಕೃಷಿ ಅಧಿಕಾರಿ ಶಂಕರ ಹಳ್ಳದಮನಿ, ಪ್ರಗತಿಪರ ರೈತರಾದ ಬಿ.ಆರ್. ಬಾಗೇವಾಡಿ, ಆತ್ಮ ಯೋಜನೆಯ ಛಾಯಾ ಪಾಟೀಲ, ಗುರುನಾಥ ಮಲ್ಲಾಪೂರ, ಬಾಪು ಗದಾಡಿ, ಸಿದ್ದಪ್ಪ ಮದೂರ, ಬಾಳಪ್ಪ ಬಬಲಿ, ಶಿವಪುತ್ರ ಮಲ್ಲಾಪುರ, ಹನಮಂತ ಗದಾಡಿ, ಮತ್ತೆಪ್ಪ ಹುಲಕುಂದ, ಶಿವಪುತ್ರ ಹುಲಕುಂದ, ರಾಮಪ್ಪ ಬಾಗೇವಾಡಿ ಇದ್ದರು.