ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೂರ್ವಭಾವಿ ಸಭೆ
ಮೂಡಲಗಿ : ಕೋವಿಡ್ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಆಚರಣೆ ಮಾಡಬೇಕೆಂದು ಮೂಡಲಗಿ ಸಿಪಿಐ ವೆಂಕಟೇಶ್ ಮುರನಾಳ ಹೇಳಿದರು.
ಮಂಗಳವಾರದಂದು ಸ್ಥಳೀಯ ಪೊಲೀಸ್ ಠಾಣೆಯ ಆವರಣದಲ್ಲಿ ಜರುಗಿದ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಮಿತ್ಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ಕಾರದಿಂದ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದು, ಗಣೇಶ ಮಂಡಳಿಯವರು ಕೋವಿಡ್ ಮಾರ್ಗಸೂಚಿ ಪ್ರಕಾರ ಗಣೇಶ ಮೂರ್ತಿಯನ್ನು ಐದು ದಿನಗಳ ಕಾಲ ಆಚರಣೆ ಮಾಡಿ ವಿಸರ್ಜನೆ ಮಾಡಬೇಕೆಂದು ಗಣೇಶ ಮಂಡಳಿಗಳಿಗೆ ಸೂಚನೆ ನೀಡಿದರು.
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳು, ಕಾನುನೂಬಾಹಿರ ಚಟುವಟಿಕೆಗಳು ಹಾಗೂ ಡಿ.ಜೆ ಸೌಂಡ್‍ಗಳನ್ನು ಬಳಸುವುದು ಕಂಡು ಬಂದಲ್ಲಿ ಅವರ ವಿರುದ್ದ ಕಾನುನೂ ಸೂಕ್ತ ಕ್ರಮ ಕೈಗೋಳ್ಳಲಾಗುವುದು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಮಾತನಾಡಿ, ಕೊರೋನಾ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಜಿಲ್ಲೆಯಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರು ಸುರಕ್ಷಿತರಲ್ಲ. ಸರ್ಕಾರ ಮಾರ್ಗಸೂಚಿಯಂತೆ ಸರಳ ರೀತಿಯಲ್ಲಿ ಗಣೇಶನ ಹಬ್ಬವನ್ನು ಆಚರಿಸೋಣ. ವಿಸರ್ಜನೆ ಮಾಡುವ ಸಂದರ್ಭದಲ್ಲಿ ಪುರಸಭೆಯಿಂದ ವಾಟರ್ ಟ್ಯಾಂಕ ವಾಹನ ಚಲಾಯಿಸಿ ಅದರಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲು ಚರ್ಚಿಸಲಾಗುತ್ತಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ, ಪಿಎಸ್‍ಐ ಎಚ್.ವೈ. ಬಾಲದಂಡಿ, ಮೂಡಲಗಿ ಹೆಸ್ಕಂ ಶಾಖಾಧಿಕಾರಿ ಪಿ.ಆರ್ ಯಡಹಳ್ಳಿ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ಗಣೇಶ ಪ್ರತಿಷ್ಠಾಪನೆಗೆ ಸ್ಥಳೀಯ ಇಲಾಖೆಗಳಿಂದ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು. ಗಣೇಶ ಆಚರಣೆಯ ಮಂಡಳಿಯವರು ಗಣೇಶ ಪ್ರತಿಷ್ಠಾಪನೆಯ ಸ್ಥಳಗಳಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರು ಹಾಗೂ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.