ಮೂಡಲಗಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರು ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿ ಸ್ಥಾಪಿಸಿ ಸಾವಿರಾರೂ ಜನರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊಲ್ಲೆಯವರ ಸೊಸೈಟಿಯು ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಶಾಖೆಗಳು ತಲೆಯೆತ್ತಿ ನಿಂತಿವೆ ಎಂದು ಯಕ್ಸಂಬಾ ಬೀರೇಶ್ವರ ಕೋ-ಆಪ್ ಸೊಸೈಟಿಯ ಮೂಡಲಗಿ ಪಟ್ಟಣದ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶಿಲತಕುಮಾರ ಎಸ್ ಕೇಮಲಾಪೂರ ಹೇಳಿದರು.
ಪಟ್ಟಣದ ಶಾಖೆಯಲ್ಲಿ ಯಕ್ಸಂಬಾದ ಬೀರೇಶ್ವರ ಕೋ-ಆಪ್ ಸೊಸೈಟಿಯ ಸಿಬ್ಬಂದಿಗೆ ಶೇ.44ರಷ್ಟು ವೇತನ ಹೆಚ್ಚಳ ಮಾಡಿರುವ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿ, ಪ್ರವಾಹ ಮತ್ತು ಕರೊನಾ ಸಮಯದಲ್ಲಿ ಬೀರೇಶ್ವರ ಸಹಕಾರಿ ಸಂಘವು ಜನ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಪ್ರಾಮಾಣಿಕ ಮತ್ತು ಶಿಸ್ತುಬದ್ಧ ಕರ್ತವ್ಯದಿಂದ ನಾಡಿನಾದ್ಯಂತ ಸ್ಥಾಪನೆಯಾಗಿರುವ ಬೀರೇಶ್ವರ ಸೊಸೈಟಿ ಶಾಖೆಗಳು ಆರ್ಥಿಕವಾಗಿ ಪ್ರಗತಿಯಲ್ಲಿವೆ. ಹೀಗಾಗಿ ಬೀರೇಶ್ವರ ಸೊಸೈಟಿ ಎಲ್ಲಾ ಸಿಬ್ಬಂದಿಗೆ ವೇತನ ಹೆಚ್ಚಿಸಲಾಗಿದೆ. ಇದರಿಂದ ಸಿಬ್ಬಂದಿಗಳ ಕುಟುಂಬಕ್ಕೆ ಆಸರೆಯಾಗಿ ಸಿಬ್ಬಂದಿಗಳ ಕುಟುಂಬದ ಸದಸ್ಯರಿಗೆ ಸಂತಸ ತಂದಿದೆ ಎಂದರು.
ಪಟ್ಟಣದ ಬೀರೇಶ್ವರ ಸೊಸೈಟಿ ಶಾಖೆಯ ವ್ಯವಸ್ಥಾಪಕ ಎ.ಎಚ್. ಕುರಬೇಟ ಮಾತನಾಡಿ, ಕರೊನಾ ಅಲೆಯಿಂದ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೀರೇಶ್ವರ ಸೊಸೈಟಿ ಸಿಬ್ಬಂದಿಗೆ ವೇತನ ಹೆಚ್ಚಿಸಿ ಸೊಸೈಟಿಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾನವಿತೆ ಮೆರೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಸದಸ್ಯರಾದ ಕೆ.ಟಿ.ಗಾಣಿಗೇರ, ನಾರಾಯಣ ಮಾಳಿ, ಮಲ್ಲಪ್ಪ ಬೋಳಿ, ಗಿರಿಗೌಡ ಪಾಟೀಲ, ವೆಂಕಪ್ಪ ಮಂಟನ್ನವರ ಹಾಗೂ ಸಿಬ್ಬಂದಿಗಳಾದ ಎಸ್.ಎಮ್. ಪಿರೋಜಿ, ವಿನಾಯಕ ಬಡಿಗೇರ, ಮಹಾದೇವ ಅರಳಿಮಟ್ಟಿ, ಸಂತೋಷ ಶಿಂಧೆ ಇದ್ದರು.