ವಿಶ್ವ ರೇಬಿಸ್ ದಿನಾಚರಣೆ; ಶ್ವಾನಗಳಿಗೆ ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ
ಮೂಡಲಗಿ: ‘ಶ್ವಾನಗಳಿಗೆ ರೇಬಿಸ್ ಲಸಿಕೆಯನ್ನು ಹಾಕಿಸುವ ಮೂಲಕ ರೇಬಿಸ್ ರೋಗವು ಹರಡದಂತೆ ಜಾಗೃತಿವಹಿಸಬೇಕು’ ಎಂದು ಮೂಡಲಗಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎಂ.ಬಿ. ವಿಭೂತಿ ಹೇಳಿದರು.
ಇಲ್ಲಿಯ ಪಶು ಆಸ್ಪತ್ರೆಯಲ್ಲಿ ಲಯನ್ಸ್ ಕ್ಲಬ್ ಪರಿವಾರ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಬಡ್ಡಿ ಮೆಡಿಕಲ್ಸ್ ಸಹಯೋಗದಲ್ಲಿ ಮಂಗಳವಾರ ವಿಶ್ವ ರೇಬಿಸ್ ದಿನಾಚರಣೆ ಆಚರಣೆ, ಉಚಿತ ರೇಬಿಸ್ ಲಸಿಕೆ ನೀಡುವುದು ಮತ್ತು ಶ್ವಾನಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿ ವರ್ಷ ಭಾರತದಲ್ಲಿ 20 ಸಾವಿರ ಜನರು ರೇಬಿಸ್‍ದಿಂದ ಸಾವನಪ್ಪುತ್ತಾರೆ ಎಂದರು.
ಸಾಕು ನಾಯಿಗಳ ಬಗ್ಗೆ ನಿರ್ಲಕ್ಷತೆ ತೋರಬಾರದು. ಕಡ್ಡಾಯವಾಗಿ ರೇಬಿಸ್ ಲಸಿಕೆಯನ್ನು ಹಾಕಿಸುವ ಮೂಲಕ ರೇಬಿಸ್ ರೋಗವನ್ನು ನಿಯಂತ್ರಿಸಬೇಕು ಎಂದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ವಾನಗಳು ಮನುಷ್ಯನ ಅತ್ಯಂತ ವಿಶ್ವಾಸದ ಪ್ರಾಣಿಯಾಗಿದ್ದು, ಮನುಷ್ಯರಷ್ಟೆ ಅವುಗಳ ಆರೋಗ್ಯ ಮುಖ್ಯವಾಗಿದೆ. ಅವುಗಳ ರಕ್ಷಣೆಯ ಬಗ್ಗೆ ಕಾಳಜಿವಹಿಸಬೇಕು ಎಂದರು.
ಲೂಯಿ ಪಾಶ್ಚರ್ಯ ರೇಬಿಸ್ ಲಸಿಕೆ ಕಂಡುಹಿಡಿಯುವ ಮೂಲಕ ಜಗತ್ತಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಮುಧೋಳ ಹಂಡ, ಲಾಬ್ರೋಡ್, ಗ್ರೇಡನ್, ಪಂಜಾಬಿ, ಡಾಬರ್ ಮತ್ತು ದೇಸಿ ಥಳಿಗಳ ಶ್ವಾನಗಳ ಪ್ರದರ್ಶನ ಮಾಡಲಾಯಿತು.
ಪಶು ಆಸ್ಪತ್ರೆಯ ಮಹಾಂತೇಶ ಹೊಸೂರ, ಶಂಕರ ಶಾಬಣ್ಣವರ, ಶಿವರುದ್ರಪ್ಪ ಮಿಲ್ಲಾನಟ್ಟಿ, ಎ.ವಿ. ಕುಲಕರ್ಣಿ, ಚನ್ನಬಸು ಬಿ. ಬಡ್ಡಿ, ಲಯನ್ಸ್ ಕ್ಲಬ್ ಸದಸ್ಯರಾದ ಡಾ.ಎಸ್.ಎಸ್. ಪಾಟೀಲ, ಶ್ರೀಶೈಲ್ ಲೋಕನ್ನವರ, ಶಿವಾನಂದ ಗಾಡವಿ, ನಾಯಿಗಳ ಮಾಲೀಕರಾದ ವಿಲಾಸ ಸಣ್ಣಕ್ಕಿ, ಯಾಕೂಬ ಗಸ್ತಿ, ಸಂಜೀವ ಸಣ್ಣಕ್ಕಿ, ಬಸು ಗಸ್ತಿ, ಬಾಳಪ್ಪ ಗಸ್ತಿ, ಸಂತಪ್ಪ ಗಸ್ತಿ, ಮಾಂತೇಶ ಭಾಗೋಜಿ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಖಜಾಂಚಿ ಸುಪ್ರೀತ ಸೋನವಾಲಕರ ಪ್ರಾಸ್ತಾವಿಕ ಮಾತನಾಡಿದರು, ಮಹಾಂತೇಶ ಹೊಸೂರ ವಂದಿಸಿದರು.