ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ : ಟಿಎಚ್‍ಓ ಡಾ. ಮುತ್ತಣ್ಣ ಕೊಪ್ಪದ
ಗೋಕಾಕ : ಕೋವಿಡ್ ತಡೆಗಟ್ಟುವ ಲಸಿಕೆಯನ್ನು ಕೆಲವರು ಇನ್ನೂ ಪಡೆದುಕೊಂಡಿಲ್ಲ. ಇದೇ ದಿ. 5 ರಂದು ನಡೆಯುವ ಲಸಿಕಾ ಅಭಿಯಾನದಲ್ಲಿ ಕೂಡಲೇ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ ಹೇಳಿದರು.
ಸ್ಥಳೀಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶನಿವಾರದಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬರುವ ಮಂಗಳವಾರದಂದು ನಡೆಯುವ ಲಸಿಕಾ ಅಭಿಯಾನ ಯಶಸ್ಸಿಗೆ ಅಧಿಕಾರಿಗಳು ಸಹಕರಿಸುವಂತೆ ಕೋರಿಕೊಂಡರು.
ಬೇರೆ ತಾಲೂಕಿಗೆ ಹೋಲಿಸಿಕೊಂಡರೆ ಗೋಕಾಕ ತಾಲೂಕಿನ ಸಾಧನೆ ಕಡಿಮೆಯಾಗಿದೆ. ಪ್ರತಿಶತವಾರು ಹೋಲಿಕೆ ಮಾಡಿದರೆ ಗೋಕಾಕ-ಮೂಡಲಗಿ ತಾಲೂಕಿನ ಲಸಿಕೆ ಕಾರ್ಯಕ್ರಮ ಇನ್ನೂ ಸುಧಾರಣೆಯಾಗಬೇಕಿದೆ. ಆದ್ದರಿಂದ ಯಾರು ಲಸಿಕೆಯನ್ನು ಹಾಕಿಕೊಂಡಿಲ್ಲವೋ ಅವರು ತಕ್ಷಣವೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಶಾಸಕರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ, ಹಿರಿಯ ಆರೋಗ್ಯ ನಿರೀಕ್ಷಕ ಶಂಕರ ಅಂಗಡಿ, ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.