‘ವಿದ್ಯಾರ್ಥಿಗಳು ಸಾಧನೆಯ ಕನಸು ಕಾಣಬೇಕು’
ಮೂಡಲಗಿ: ವಿದ್ಯಾರ್ಥಿಗಳು ಭವಿಷ್ಯತ್ತಿನ ಸಾಧನೆಯ ಬಗ್ಗೆ ಕನಸು ಕಾಣಬೇಕು’ ಎಂದು ಚೈತನ್ಯ ವಸತಿ ಶಾಲೆಯ ಆಡಳಿತಾಧಿಕಾರಿ ಪ್ರೊ.ಎಸ್.ಎಂ. ಕಮದಾಳ ಹೇಳಿದರು.
ಇಲ್ಲಿಯ ಚೈತನ್ಯ ಆಶ್ರಮ ವಸತಿ ಶಾಲೆಯಲ್ಲಿ ಮುರಾರ್ಜಿ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮತ್ತು ತರಬೇತಿ ನೀಡಿದ ಶಿಕ್ಷಕರ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದು ಸೂಕ್ತ ಮಾರ್ಗದರ್ಶನವನ್ನು ನೀಡುವ ಮೂಲಕ ಅವರನ್ನು ಬೆಳಕಿಗೆ ತರಬೇಕು ಎಂದರು.
ಮುಖ್ಯ ಅತಿಥಿ ಚಿಕ್ಕೋಡಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಅರಿಹಂತ ಬಿರಾದಾರ ಅವರು ಮಾತನಾಡಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿರುವುದು ಉತ್ತಮ ಸಾಧನೆಯಾಗಿದೆ. ಇಲ್ಲಿ ಶಿಕ್ಷಕರ ಪರಿಶ್ರಮವು ಮುಖ್ಯ ಎಂದರು.
ಅತಿಥಿ ಬಾಲಶೇಖರ ಬಂದಿ ಮಾತನಾಡಿ ಚೈತನ್ಯ ಆಶ್ರಮ ವಸತಿ ಶಾಲೆಯು ಕಳೆದ ಎರಡುವರೆ ದಶಕದಲ್ಲಿ ಸಾಕಷ್ಟು ಪ್ರತಿಭೆಗಳನ್ನು ನಾಡಿಗೆ ನೀಡಿದೆ. ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ಈ ಶಾಲೆಯ ಮಕ್ಕಳು ಗುರುತಿಸಕೊಂಡಿದ್ದಾರೆ. ಈಗ ರಾಜ್ಯ ಮಟ್ಟಕ್ಕೆ ಮೊದಲ ಸ್ಥಾನ ಪಡೆದಿರುವುದು ಉತ್ತಮ ಸಾಧನೆಯಾಗಿದೆ ಎಂದರು.
ಮುರಾರ್ಜಿ ದೇಸಾಯಿ ಶಾಲೆಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ಅರ್ಪಿತಾ ಬಸವರಾಜ ಕಬ್ಬೂರ, 10ನೇ ಸ್ಥಾನ ಪಡೆದ ದಾನಯ್ಯ ಹಿರೇಮಠ, 27ನೇ ಸ್ಥಾನ ಪಡೆದ ರಾಘವೇಂದ್ರ ಕಿತ್ತೂರ, 44ನೇ ಸ್ಥಾನ ಪಡೆದ ಸುಶ್ಮೀತಾ ಹಣಜಿ, ಅಲ್ಪಸಂಖ್ಯಾತ ಮುರಾರ್ಜಿ ಶಾಲೆಗೆ ಬೆಳಗಾವಿ ಜಿಲ್ಲೆಗೆ 2ನೇ ಸ್ಥಾನ ಪಡೆದ ಪ್ರಜ್ವಲ ತೋಟಗಿ ಮತ್ತು ಪಾಲಕರನ್ನು ಹಾಗೂ ತರಬೇತಿ ನೀಡಿರುವ ಶಿಕ್ಷಕರನ್ನು ಸನ್ಮಾನಿಸಿದರು.
ವೈ.ಬಿ. ಪಾಟೀಲ ಅಧ್ಯಕ್ಷತೆವಹಿಸಿದ್ದರು.
ಅತಿಥಿಗಳಾಗಿ ಎಲ್.ಎಂ. ಪಂಚಗಾಂವಿ, ಮುಖ್ಯ ಶಿಕ್ಷಕರಾದ ಸಂಧ್ಯಾ ಪಾಟೀಲ, ಕುಮಾರ ಹುಬ್ಬಳ್ಳಿ ವೇದಿಕೆಯಲ್ಲಿದ್ದರು. ವಿನೋದ ಉಮರಾಣಿ ನಿರೂಪಿಸಿದರು, ಸಾವಂತ ಕಬಾಡಗಿ ವಂದಿಸಿದರು.