ಕನ್ನಡ ನಾಡು, ನುಡಿಯ ರಕ್ಷಣೆಗೆ ಎಲ್ಲರೂ ಬದ್ದರಾಗಿರಬೇಕು
ಮೂಡಲಗಿ: ‘ಕನ್ನಡ ನಾಡು, ನುಡಿಯ ರಕ್ಷಣೆಗಾಗಿ ಜಾತಿ, ಧರ್ಮ, ಮೇಲು, ಕೀಳು ಎನ್ನದೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಮಾಡಬೇಕು’ ಎಂದು ತಿಗಡಿ ಸಿದ್ಧಾರೂಢಮಠದ ಶಂಕರಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಬಣ)ಯ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಕನ್ನಡ ಭಾಷೆಗೆ ಎಂದಿಗೂ ಅಳಿವು ಇಲ್ಲ, ಕನ್ನಡಕ್ಕೆ ಅಪಾಯ ಬಂದಾಗ ಎಲ್ಲರೂ ರಕ್ಷಣೆಗೆ ಬದ್ದರಾಗಿರಬೇಕು ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಅಬ್ದುಲ್ ಮಿರಜಾನಾಯಕ ಘಟಕವನ್ನು ಉದ್ಘಾಟಿಸಿ ಮಾತನಾಡಿ ಕರವೇ ಘಟಕವು ಉತ್ತಮ ಕಾರ್ಯಗಳನ್ನು ಮಾಡುವುದರ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಉಳಿಸಿಕೊಳ್ಳಬೇಕು ಎಂದರು.
ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಕನ್ನಡ ನಾಡು, ನುಡಿ ಮತ್ತು ಸಂಸ್ಕøತಿ ಬೆಳವಣಿಗೆಗಾಗಿ ನಿರಂತರವಾಗಿ ತಮ್ಮೊಂದಿಗೆ ಇರುತ್ತಾರೆ ಎಂದರು.
ಅತಿಥಿ ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ಕನ್ನಡವು ಪ್ರಾಚೀನ ಭಾಷೆಯಾಗಿದ್ದು, ಅನೇಕ ಮಹನೀಯರ ಪರಿಶ್ರಮದ ಫಲವಾಗಿ ಕರ್ನಾಟಕವು ವಿಶ್ವದಲ್ಲಿ ಗುರುತಿಸಿಕೊಂಡಿದೆ.
ಕನ್ನಡ ನಾಡು, ನುಡಿಯ ಬೆಳೆಸುವುದು ಮತ್ತು ಉಳಿಸುವಲ್ಲಿ ಸಾಹಿತಿ, ಬರಹಗಾರರು, ಚಿಂತಕರಷ್ಟೇ ಕರ್ನಾಟಕ ರಕ್ಷಣಾ ವೇದಿಕೆಯಂತ ಕನ್ನಡ ಸಂಘಟನೆಗಳ ಪಾತ್ರ ಬಹು ಮುಖ್ಯವಾಗಿದೆ ಎಂದರು.
ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ ಮಾತನಾಡಿ ಕನ್ನಡ ನಾಡು, ನುಡಿಯ ರಕ್ಷಣೆಯಲ್ಲಿ ಕರವೇ ಕಾರ್ಯಕರ್ತರ ಗುರುತರವಾದ ಜವಾಬ್ದಾರಿಯಾಗಿದೆ ಎಂದರು.
ಗೋಕಾಕ ತಾಲ್ಲೂಕಾ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ ಕಳೆದ 23 ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯದಲ್ಲಿ ಕಾರ್ಯಮಾಡುತ್ತಿದ್ದು, ಸದ್ಯ 60 ಲಕ್ಷ ಕಾರ್ಯಕರ್ತರನ್ನು ಹೊಂದಿದೆ ಎಂದರು.
ಕನ್ನಡ ನಾಡು, ನುಡಿಗೆ ಒಂದಿಷ್ಟೂ ಚ್ಯುತಿ ಬಾರದಂತೆ ಕನ್ನಡವನ್ನು ಕಾಯುವಲ್ಲಿ ಸದಾ ಸಿದ್ದರಾಗಿರುತ್ತೇವೆ ಎಂದರು.
ಮೂಡಲಗಿ ತಾಲ್ಲೂಕು ಕರವೇ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕಾಕಡೆ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಇರುವುದರಿಂದ ಇಂದು ಅನ್ಯ ರಾಜ್ಯದವರು ಕನ್ನಡ ನೆಲಕ್ಕೆ ಕೈಹಂಚದಂತಾಗಿದೆ. ಕನ್ನಡ ನಾಡು, ನುಡಿಯ ರಕ್ಷಣೆಗಾಗಿ ಕರವೇ ಕಾರ್ಯಕರ್ತರು ಸೈನ್ಯದಂತೆ ಸದಾ ಸಿದ್ದರಾಗಿರುತ್ತಾರೆ ಎಂದರು.
ಅಧ್ಯಕ್ಷತೆವಹಿಸಿದ್ದ ಕರವೇ ಮೂಡಲಗಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹುಲಕುಂದ ಮಾತನಾಡಿ ಮೂಡಲಗಿ ತಾಲ್ಲೂಕಿನಲ್ಲಿ ಕರವೇ ಘಟಕಗಳನ್ನು ಬಲಿಷ್ಠವಾಗಿ ಬೆಳೆಸಲಾಗುತ್ತಿದ್ದು, ಸಾಹಿತಿ, ಚಿಂತಕರು ಮಾರ್ಗದರ್ಶನವನ್ನು ನೀಡುತ್ತಿರಲಿ ಎಂದರು.
ತಿಗಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಹಣಮಂತ ಪೂಜೇರಿ, ಪಿಡಿಒ ಎಸ್.ಆರ್. ಪತ್ತಾರ ಮತ್ತು ಗ್ರಾಮದ ಹಿರಿಯರು ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಕರವೇ ನೂತನ ಘಟಕದ ಗೌರವಾಧ್ಯಕ್ಷ ಲಕ್ಷ್ಮಣ ಹೂಲಿಕಟ್ಟಿ, ಅಧ್ಯಕ್ಷ ದುಂಡಪ್ಪ ಪಾಟೀಲ, ಉಪಾಧ್ಯಕ್ಷ ಮಹಾದೇವ ಹುಚ್ಚನ್ನವರ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಹುಚ್ಚನ್ನವರ, ಕಾರ್ಯದರ್ಶಿ ಪ್ರದೀಪ ವಡಚನ್ನವರ, ಸಂಘಟನಾ ಕಾರ್ಯದರ್ಶಿ ವಿಠ್ಠಲ ಕಂಕಣವಾಡಿ, ಸಂಚಾಲಕ ಲಕ್ಷ್ಮೀಕಾಂತ ವಾಲಿಕಾರ ಇದ್ದರು.
ಭೀಮಶಿ ಪಾಟೀಲ ಸ್ವಾಗತಿಸಿದರು, ಗೋಕಾಕದ ಶೈಲಜಾ ಕೊಕರಿ ನಿರೂಪಿಸಿದರು, ಅಶೋಕ ಪೂಜಾರಿ ವಂದಿಸಿದರು.