ಜನಗಣತಿಯಂತೆ ಜಾನುವಾರು ಗಣತಿಗೆ ಆಪ್ ಸೃಷ್ಠಿ
ಮೂಡಲಗಿ: ಜನಗಣತಿಯಂತೆ ಜಾನುವಾರಗಳ ಗಣತಿಯೊಂದಿಗೆ ಅವುಗಳ ಸಂಪೂರ್ಣ ಮಾಹಿತಿ ನೀಡುವಂತ ಆಪ್‍ವನ್ನು ಬೆಳಗಾವಿಯ ಆಡೀಸ್‍ದವರು ಅಭಿವೃದ್ದಿಪಡಿಸಿದ್ದಾರೆ. ಅದನ್ನು ಮೂಡಲಗಿ ತಾಲ್ಲೂಕಿನಲ್ಲಿ ರೈತರು ಪ್ರಾಯೋಗಿಕವಾಗಿ ಬಳಿಸುವ ಮೂಲಕ ಅದನ್ನು ಸರ್ಕಾರವು ಅನುಷ್ಠಾನಗೊಳಿಸುವುದಕ್ಕಾಗಿ ತಾವು ಶಿಫಾರಸ್ಸು ಮಾಡುವೆವು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಇಲ್ಲಿಯ ಮಹಾಲಕ್ಷ್ಮೀ ಸೊಸೈಟಿಯ ಸಭಾಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರಿಗೆ ಜಾನುವಾರುಗಳು ಆಸ್ತಿಯಾಗಿದ್ದು ಅವುಗಳ ವಿಮೆ ಮಾಹಿತಿ, ಯೋಗಕ್ಷೇಮ, ಅವುಗಳ ರಕ್ಷಣೆ, ಅವು ಕಳವು ಆದಲ್ಲಿ, ಅವುಗಳಿಗೆ ರೋಗ, ಇತರೆ ಕಾಯಿಲೆಗಳು ಬಾಧಿಸಿದರೆ ಅಂಥ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂತೆ ಮೊಬೈಲ್ ಫೋನ್‍ದಲ್ಲಿ ಸರಳವಾಗಿ ನಿಭಾಯಿಸುವಂತೆ ‘ಆಡೀಸ್ ಆಪ್’ ಒಳಗೊಂಡಿದೆ. ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದರು.
ಜಾನುವಾರುಗಳ ಕಳ್ಳ ಸಾಗಾಣಿಕೆಯನ್ನು ನಿಯಂತ್ರಿಸಲು ಅನುಕೂಲವಾಗಲಿದೆ. ಜಾನುವಾರುಗಳಿಗೆ ಲಸಿಕೆ ಹಾಕುವುದು ಸೇರಿದಂತೆ ಅವುಗಳ ಆರೋಗ್ಯ ಚಿಕಿತ್ಸೆ ಬಗ್ಗೆ ಕಾಳಜಿ ಮಾಡುವಲ್ಲಿ ಆಪ್ ಉಪಯೋಗವಾಗಲಿದೆ ಎಂದರು.
ಜಾನುವಾರದ ಫೋಟೋ ತೆಗೆದು ಆಪ್‍ದಲ್ಲಿ ಸೇರಿಸಿ, ದನದ ಎಲ್ಲ ವಿವರವನ್ನು ನೀಡಬೇಕು. ಇದರಿಂದ ಗ್ರಾಮ ಪಂಚಾಯ್ತಿ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಜಾನುವಾರುಗಳ ಸಂಪೂರ್ಣ ಮಾಹಿತಿಯು ಕ್ಷಣಾರ್ಧದಲ್ಲಿ ದೊರೆಯುವಂತಿದೆ ಎಂದರು.
ಕಲ್ಲೋಳಿಯಲ್ಲಿ ನನಗೆ ಸಂಬಂಧಿಸಿದ ಜಾನುವಾರಗಳ ಮಾಹಿತಿಯನ್ನು ಆಪ್‍ದಲ್ಲಿ ಅಳವಡಿಸಿದ್ದು. ಇನ್ನಷ್ಟು ಅದರ ಪ್ರಾತಕ್ಷತೆಯನ್ನು ಮಾಡಿ ಅದರ ಸಾದಕ ಬಾಕಗಳನ್ನು ಪರಿಗಣಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಯೋಚನೆ ಇದೆ ಎಂದರು.
ಈ ಆಪ್‍ವನ್ನು ಬಳಸಿಕೊಂಡು ಸರ್ಕಾರದ ಪಶುಸಂಗೋಪನಾ ಇಲಾಖೆಯ ಸೌಲಭ್ಯ ಸೇರಿದಂತೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಗೆ ಸುಲಭವಾಗುವುದು ಎಂದರು.
ಬೆಳಗಾವಿ ಆಡೀಸ್‍ನ ಸಂಸ್ಥಾಪಕ ನಿರ್ದೇಶಕ ಸುಜೀತ ಹುಕ್ಕೇರಿಕರ ಆಪ್ ಬಗ್ಗೆ ವಿವರಣೆ ನೀಡಿ ರೈತರು ಇದನ್ನು ಉಚಿತವಾಗಿ ಬಳಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಚೂನಪ್ಪ ಪೂಜೇರಿ, ರಾಜೇಂದ್ರ ನಾಯ್ಕ, ಮನ್ನೂರ, ಈರಣ್ಣ ಸಸಾಲಟ್ಟಿ ಮತ್ತಿತರರು ಇದ್ದರು.