ಮೂಡಲಗಿ: ಪ್ರಧಾನ ಮಂತ್ರಿ ಮಿತ್ರ ಪಾರ್ಕ್ ಯೋಜನೆಯಡಿ ಒಟ್ಟು ರೂ. 4,445 ಕೋಟಿ ವೆಚ್ಚದಲ್ಲಿ ಏಳು ಮೆಗಾ ಜವಳಿ ಪಾರ್ಕ್‍ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ಕೇಂದ್ರ ಜವಳಿ ಸಚಿವಾಲಯದ ರಾಜ್ಯ ಸಚಿವೆ ದರ್ಶನ ಜರ್ದೋಶ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಡಿ.10 ರಂದು ಪತ್ರಿಕಾ ಹೇಳಿಕೆ ನೀಡಿರುವ ಈರಣ್ಣ ಕಡಾಡಿ ಅವರು ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಭಾರತ ಸರ್ಕಾರ ಜವಳಿ ಸಚಿವಾಲಯವು ಪ್ರಧಾನ ಮಂತ್ರಿ ಮಿತ್ರ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಧಾನ ಮಂತ್ರಿ ಮಿತ್ರ ಪಾರ್ಕ್ ಯೋಜನೆಯು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಮತ್ತು ಜಾಗತಿಕ ಜವಳಿ ಭೂಪಟದಲ್ಲಿ ಭಾರತವನ್ನು ಬಲವಾಗಿ ಇರಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಸಾಕಾರಗೊಳಿಸುವ ಗುರಿಯನ್ನು ಹೊಂದಿದೆ. ಪ್ರತಿ ಪಾರ್ಕ್‍ಗೆ ಸುಮಾರು ಒಂದು ಲಕ್ಷ ನೇರ ಮತ್ತು ಎರಡು ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವಿದೆ ಎಂದರು.
ಈ ಯೋಜನೆಯನ್ನು ಪ್ಯಾನ್-ಇಂಡಿಯಾ ಆಧಾರದ ಮೇಲೆ ಜಾರಿಗೊಳಿಸಲಾಗುವುದು. ಕರ್ನಾಟಕ, ತಮಿಳುನಾಡು, ಪಂಜಾಬ್, ಒಡಿಶಾ, ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಅಸ್ಸಾಂ, ಮಧ್ಯಪ್ರದೇಶ ಮತ್ತು ತೆಲಂಗಾಣದಂತಹ ಹಲವಾರು ರಾಜ್ಯಗಳು ಪ್ರಧಾನ ಮಂತ್ರಿ ಮಿತ್ರ ಪಾರ್ಕ್ ಯೋಜನೆಯನ್ನು ಜಾರಿಗೊಳಿಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಸಚಿವಾಲಯ ತಿಳಿಸಿದೆ ಎಂದರು.
