‘ಸಾಹಿತ್ಯದ ಓದುಗಾರಿಕೆಯು ಮನುಷ್ಯನ ಹೃದಯ ಶುದ್ದತೆ ಮತ್ತು ಸಂಸ್ಕಾರಗೊಳಿಸುವುದು
ಮೂಡಲಗಿ: ‘ಸಾಹಿತ್ಯದ ಓದು ಮನುಷ್ಯನ ಹೃದಯವನ್ನು ಶುದ್ಧ ಮತ್ತು ಸಂಸ್ಕಾರಗೊಳಿಸುವ ಪ್ರಕ್ರಿಯೆಯಾಗಿದೆ’ ಎಂದು ಸಾಹಿತಿ ಗೋಕಾಕದ ಜೆಸ್‍ಎಸ್ ಕಾಲೇಜು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು.
ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದಿಂದ ಪ್ರತಿ ತಿಂಗಳು ಆಯೋಜಿಸಲಿರುವ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯದ ಓದು ಜೀವನೋತ್ಸಾಹವನ್ನು ವೃದ್ಧಿಸುತ್ತದೆ ಎಂದರು.
ಇಂದಿನ ತಂತ್ರಜ್ಞಾನದ ಬೆಳವಣಿಗೆಯ ಒತ್ತಡೆದಲ್ಲಿ ಸಾಹಿತ್ಯದ ಅಭಿರುಚಿ, ಪುಸ್ತಕ ಓದಿನಿಂದ ಜನರು ವಿಮುಖರಾಗುತ್ತಿರುವುದು ಸಮಾಜ ಮತ್ತು ಯುವ ಪೀಳಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಸಮಾಜದ ಶುದ್ಧಿಗಾಗಿ ಸಾಹಿತ್ಯದ ಚಿಂತನ, ಮಂಥನಗಳು ನಿರಂತರವಾಗಿರಬೇಕು ಎಂದರು.
ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮೋಹನ ಪಾಟೀಲ ಮಾತನಾಡಿ ಆಸಕ್ತಿ ಮತ್ತು ಅಭಿರುಚಿ ಇರುವಲ್ಲಿ ಸಾಹಿತ್ಯದ ಬಗ್ಗೆ ಒಲವು ಇರುತ್ತದೆ. ಸಾಹಿತ್ಯವನ್ನು ಓದುವ ಮೂಲಕ ಭಾಷೆಯನ್ನು ಬೆಳೆಸಬೇಕು. ಮೂಡಲಗಿಯ ಜ್ಞಾನದೀಪ್ತಿ ಪ್ರತಿಷ್ಠಾನವು ಸಾಹಿತ್ಯ ಚಟುವಟಿಕೆಗಳಿಗೆ ಪೀಠಿಕೆ ಹಾಕಿರುವುದು ಉತ್ತಮ ಬೆಳವಣಿಗೆಯಾಗಿದ್ದು ಮತ್ತು ಶ್ಲಾಘನೀಯವಾಗಿದೆ ಎಂದರು.
ಅತಿಥಿ ವಿಭಾಗೀಯ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಮಾತನಾಡಿ ಮನುಷ್ಯನ ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಹಳಗನ್ನಡ ಸಾಹಿತ್ಯದಿಂದ ಹಿಡಿದು ಹೊಸಗನ್ನಡ ಸಾಹಿತ್ಯದ ಎಲ್ಲ ಹಂತಗಳಲ್ಲಿ ಕನ್ನಡ ಸಾಹಿತ್ಯದ ಹರವು ದೊಡ್ಡದಿದೆ. ಸಾಹಿತ್ಯದ ಓದು ನಿರಂತವಾಗಿದ್ದರೆ ಮಾತ್ರ ಸಮಾಜವು ಸಾಂಸ್ಕøತಿಕವಾಗಿ ಬೆಳೆಯುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ ಸಾಹಿತ್ಯದ ಓದಿನಿಂದ ವಿಮುಖವಾದರೆ ಸಮಾಜಕ್ಕೆ ಬಹುದೊಡ್ಡ ನಷ್ಟವಾಗುತ್ತದೆ. ಸಾಹಿತ್ಯದಿಂದ ಮನುಷ್ಯನ ಆಂತರಿಕ ಸೌಂದರ್ಯವು ವೃದ್ದಿಸುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಪ್ರೊ. ಶಿವಾನಂದ ಬೆಳಕೂಡ, ನಿವೃತ್ತ ಶಿಕ್ಷಕ ಎ.ಎಲ್. ಶಿಂಧಿಹಟ್ಟಿ, ಬಾಲಶೇಖರ ಬಂದಿ ಮಾತನಾಡಿದರು.
ಸೋಮಶೇಖರಯ್ಯ ಕಂಠೀಕಾರಮಠ ಮತ್ತು ಬಸವರಾಜ ಕರಕಂಬಿ ಅವರಿಂದ ಗಾನ ಸುಧೆ ಜರುಗಿತು. ತಾವರಗೇರಿ ರೇಣುಕಪ್ಪ ತಂಡದವರಿಂದ ರಾಮಾಯಣದ ಸೀತಾಪಹಣ ಸನ್ನಿವೇಶನವನ್ನು ಪ್ರದರ್ಶಿಸಿದರು.
ಬೈಲಹೊಂಗಲದ ಸಂತೋಷ ಕೊಳವಿ, ವಿ.ಎಸ್. ಹಂಚಿನಾಳ, ಡಾ. ಮಹಾದೇವ ಜಿಡ್ಡಿಮನಿ, ಸಿದ್ರಾಮ್ ದ್ಯಾಗಾನಟ್ಟಿ, ಆರ್.ಟಿ. ಲಂಕೆಪ್ಪನ್ನವರ, ಬಸವರಾಜ ತರಕಾರ, ಸಂತೋಷ ಪಾಟೀಲ, ಬಿ.ಕೆ. ಕಾಡಪ್ಪಗೋಳ, ಪುಲಕೇಶ ಸೋನವಾಲಕರ, ಶಿವರಡ್ಡಿ ಹುಚ್ಚರಡ್ಡಿ, ಸುಭಾಷ ಕುರಣಿ, ಡಾ. ಶಿವಲಿಂಗ ಅರಗಿ, ಡಾ. ಬಸವರಾಜ ಗೌಡರ, ಪುಲಕೇಶ ಸೋನವಾಲಕರ, ಎನ್.ಟಿ. ಪಿರೋಜಿ, ಬಸವರಾಜ ಮಂಗಿ, ಬಿ.ವೈ. ಶಿವಾಪುರ ಇದ್ದರು.
ಜ್ಞಾನದೀಪ್ತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಸ್ವಾಗತಿಸಿದರು, ಮಹಾವೀರ ಸಲ್ಲಾಗೋಳ ನಿರೂಪಿಸಿದರು, ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎ.ಎಚ್. ಒಂಟಗೂಡಿ ವಂದಿಸಿದರು.