ಮೂಡಲಗಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಬೆಳದಿಂಗಳ ಸಾಹಿತ್ಯ ಚಿಂತನ ಮಂಥನದಲ್ಲಿ ಕುವೆಂಪು ಸಾಹಿತ್ಯ ಕುರಿತು ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಮಾತನಾಡಿದರು
ಮೂಡಲಗಿ: ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ವೈಚಾರಿಕತೆಯ ಸ್ಪರ್ಷ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ವಿಶ್ವಮಾನ್ಯವಾಗಿ ಬೆಳೆಸಿದ ಯುಗದ ಕವಿ’ ಎಂದು ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಹೇಳಿದರು.
ಇಲ್ಲಿಯ ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮದ ಉಪನ್ಯಾಸ ಸಂಚಿಕೆ 1 ‘ಕುವೆಂಪು ವಿಶ್ವಮಾನವ ಸಂದೇಶ ಹಾಗೂ ವೈಚಾರಿಕತೆ’ ಕುರಿತು ಉಪನ್ಯಾಸ ನೀಡಿದ ಅವರು ಕುವೆಂಪು ಅವರ ಸಾಹಿತ್ಯದಲ್ಲಿ ವಿಚಾರ ಕ್ರಾಂತಿ, ನಿರಂಕುಶಮತಿ ಹಾಗೂ ವಿಶ್ವಮಾನವ ದಾರ್ಶನಿಕ ಸಂದೇಶಗಳು ಸರ್ವಕಾಲಿಕ ಮೌಲ್ಯವಾಗಿವೆ ಎಂದರು.
ಅಜ್ಞಾನ, ಮೌಢ್ಯಗಳು, ಧಾರ್ಮಿಕ ಆಚರಣೆಗಳಿಂದ ಜಾತಿ, ಧರ್ಮಗಳ ಭೇದಗಳ ಬಗ್ಗೆ ಇರುವ ವ್ಯಾಪಕತೆಯನ್ನು ಕುವೆಂಪು ಅವರು ಕಾವ್ಯ, ನಾಟಕ, ಕಾದಂಬರಿಗಳ ಮೂಲಕ ವ್ಯಕ್ತಪಡಿಸಿ ಅವುಗಳನ್ನು ತಿದ್ದುವ ಕಾರ್ಯಕ್ಕೆ ಸಾಹಿತ್ಯ, ಬರವಣಿಗೆಯನ್ನು ಬಳಸಿಕೊಂಡರು ಎಂದರು.
ಕುವೆಂಪು ಅವರ ರಾಮಾಯಣ ದರ್ಶಣಂ ಮಹಾಕಾವ್ಯವು ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿಯಾಗಿದೆ. ಇಲ್ಲಿಯ ಬರುವ ರಾಮನು ಸೀತೆಯೊಂದಿಗೆ ಅಗ್ನಿ ಪ್ರವೇಶ ಮಾಡುವ ಸಂಗತಿಯು ಮಹಿಳೆಯ ಮೇಲಿನ ದೌರ್ಜನ್ಯ, ಹಿಂಸೆಗಳ ಪ್ರಸ್ತುತ್ತ ವಿಕೃತಗಳಿಗೆ ಉತ್ತರ ರೂಪದಲ್ಲಿ ಕುವೆಂಪು ಅವರು ಕಟ್ಟಿಕೊಟ್ಟ ಸಂಗತಿ ಅಪೂರ್ವವಾಗಿದೆ ಎಂದರು.
ಕುವೆಂಪು ಅವರ ಶೂದ್ರ ತಪಸ್ವಿ ನಾಟಕದಲ್ಲಿ ವರ್ಣ ನೀತಿ, ಶೋಷಣೆಯನ್ನು ತಿರಸ್ಕರಿಸಿದ್ದು ಸೇರಿದಂತೆ ರಾಮಾಯಣದಲ್ಲಿ ತಿರಸ್ಕರಿಸಿದ ರಾವಣ, ಶೂರ್ಪಣಕಿ, ಮಂಥರೆಯಲ್ಲಿ ಇರುವ ಅಂತ:ಕರಣದ ಮೌಲ್ಯಗಳನ್ನು ಎಳೆ, ಎಳೆಯಾಗಿ ಬಿಂಬಿಸಿರುವುದು ಕುಂವೆಂಪು ಅವರ ಸಾಹಿತ್ಯದ ಸೂಕ್ಷ್ಮತೆಯನ್ನು ವ್ಯಕ್ತಪಡಿಸುತ್ತದೆ ಎಂದರು.
ಪ್ರಕೃತಿ, ದೇಶಪ್ರೇಮ, ಆದರ್ಶಗಳು, ಕ್ರಾಂತಿ, ವೈಚಾರಿಕತೆ, ಆಧ್ಯಾತ್ಮಿಕತೆ, ಧರ್ಮ ಸಮನ್ವಯತೆ ಹೀಗೆ ಹತ್ತು ಹಲವಾರು ಸಾಮಾಜಿಕ ಮೌಲ್ಯಗಳ ಪ್ರತಿಪಾದನೆಯ ಮೂಲಕ ಕುವೆಂಪು ವಿಚಾರಗಳ, ಭಾವನಗೆಗಳ ವಿಸ್ತಾರವು ಯಾರಿಗೂ ನಿಲುಕದಿಂತಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಸಾಹಿತಿ, ಚಿಂತಕ ಬಾಲಶೇಖರ ಬಂದಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರು ದೊರೆಯಲು ಐರೀಷ ಕವಿ ಜೇಮ್ಸ್ ಕಸೀನ್ ಅವರನ್ನು ನೆನಯಬೇಕು ಎಂದರು.
ಕುವೆಂಪು ಅವರು ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣದೃಷ್ಟಿ, ಸ್ವಾಭಿಮಾನ ಮತ್ತು ವಿಚಾರಕ್ರಾಂತಿಯಂತ ಸಪ್ತಸೂತ್ರಗಳು ವಿಶ್ವಮಾನವತೆಯ ಅಂಶಗಳಾಗಿವೆ. ಕುವೆಂಪು ಅವರ ಕಾವ್ಯ, ಕಥೆ, ನಾಟಕಗಳನ್ನು ಯುವ ಪೀಳಿಗೆ ಓದುವುದು ಇಂದಿನ ಅವಶ್ಯಕತೆ ಇದೆ ಎಂದರು.
ಜ್ಞಾನದೀಪ್ತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ಥಳೀಯ ಹಿರಿಯ, ಕಿರಿಯ ಸಾಹಿತಿಗಳ ಅನುಭವ ಮತ್ತು ಚಿಂತನಗಳನ್ನು ಬಳಸುವುದು ಮತ್ತು ನವ ಪ್ರತಿಭೆಗಳನ್ನು ಬೆಳೆಸುವುದು ಜ್ಞಾನದೀಪ್ತಿಯ ಪ್ರತಿಷ್ಠಾನದ ಮುಖ್ಯ ಉದ್ಧೇಶವಾಗಿದೆ. ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲ ಕನ್ನಡ ಮನಸ್ಸುಗಳ ಸಹಕಾರ ಅವಶ್ಯವಿದೆ ಎಂದರು.
ಯುವ ಕವಿ ಶಿವರಾಜ ಕಾಂಬಳೆ ಕುವೆಂಪು ಅವರ ಕವಿತೆಯನ್ನು ಸುಶ್ರಾವ್ಯವಾಗಿ ಗಾಯನಮಾಡಿದರು.
ಬೆಳದಿಂಗಳ ಮೊದಲ ಉಪನ್ಯಾಸದ ಪ್ರಾಯೋಜಕತ್ವವಹಿಸಿದ್ದ ಪ್ರೊ. ಸುಭಾಷ ಎಂ. ಕಮದಾಳ ಅವರನ್ನು ವೇದಿಕೆಯಲ್ಲಿ ಗೌರವಿಸಿದರು.
ಪ್ರೊ. ಸಂಗಮೇಶ ಗುಜಗೊಂಡ, ಪ್ರೊ. ಶಿವಾನಂದ ಬೆಳಕೂಡ, ಬಸವರಾಜ ತರಕಾರ, ಬಿ.ವೈ. ಶಿವಾಪುರ, ಸಿದ್ರಾಮ್ ದ್ಯಾಗಾನಟ್ಟಿ, ಉಮೇಶ ಬೆಳಕೂಡ, ಸುಭಾಷ ಕುರಣೆ, ಮಹಾಂತೇಶ ಹೊಸೂರ ಮತ್ತಿತರರು ಇದ್ದರು.
ಸುರೇಶ ಲಂಕೆಪ್ಪನ್ನವರ ನಿರೂಪಿಸಿದರು, ಪ್ರತಿಷ್ಠಾನದ ಕಾರ್ಯದರ್ಶಿ ಎ.ಎಚ್. ಒಂಟಗೋಡಿ ವಂದಿಸಿದರು.