ಬೆಳಗಾವಿ: ಗೋಕಾಕ ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಗೋಕಾಕ ನಗರದ ಬಳಿ ಗಟ್ಟಿ ಬಸವಣ್ಣ ಜಲಾಶಯ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ. ಆದಷ್ಟು ಬೇಗನೇ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾದಿಂದ ಎಲ್ಲ ರೀತಿಯ ಅನುಮತಿ ಮತ್ತು ನೆರವು ನೀಡಲಾಗುವುದು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅವರ ಕಚೇರಿಯಲ್ಲಿ ಸೋಮವಾರ ನಡೆದ ಗಟ್ಟಿ ಬಸವಣ್ಣ ಯೋಜನೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಸಾಧ್ಯವಾದರೆ ಮುಂದಿನ ವರ್ಷದ ಜೂನ್ ವೇಳೆಗೆ ಗಟ್ಟಿ ಬಸವಣ್ಣ ಜಲಾಶಯ ಪೂರ್ಣಗೊಳ್ಳಬೇಕು.
ಇದಕ್ಕೆ ಅಗತ್ಯವಿರುವ ಅರಣ್ಯ, ಪರಿಸರ ಮತ್ತಿತರ ಇಲಾಖೆಗಳಿಂದ ಅಗತ್ಯ ಅನುಮತಿಯನ್ನು ತ್ವರಿತವಾಗಿ ಪಡೆದುಕೊಳ್ಳಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯೋಜನೆ ಅನುಷ್ಠಾನೆ ಸುಗಮ ಮತ್ತು ತ್ವರಿತವಾಗಿ ಕೈಗೊಳ್ಳಲು ಅರಣ್ಯ, ನೀರಾವರಿ, ಕಂದಾಯ, ಪರಿಸರ ಇಲಾಖೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು.
ಯೋಜನೆಗೆ ಸಂಬಂಧಿಸಿದಂತೆ ಪ್ರತಿವಾರ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದರು.
*ಜಲಾಶಯ ಯೋಜನೆಯ ಸ್ಥೂಲ ಪರಿಚಯ* :
ಗೋಕಾಕ ಸುತ್ತಮುತ್ತಲಿನ ನೂರಕ್ಕೂ ಅಧಿಕ ಹಳ್ಳಿಗಳಿಗೆ ಕುಡಿಯುವ ನೀರಿನ ತೊಂದರೆ ಕಂಡುಬರುತ್ತಿದೆ. ಈ ಸಮಸ್ಯೆ ನಿವಾರಣೆಗೆ ಗೋಕಾಕ ಭಾಗದ ಮಾರ್ಕಂಡೇಯ ನದಿಗೆ ಗಟ್ಟಿ ಬಸವಣ್ಣ ಜಲಾಶಯ ನಿರ್ಮಾಣ ಮಾಡುವುದು ಸೂಕ್ತವಾಗಿದೆ.
ಮಾರ್ಕಂಡೇಯ ನದಿಗೆ ಜಲಾಶಯ ನಿರ್ಮಿಸಿ ಆರು ಟಿಎಂ.ಸಿ. ನೀರು ಸಂಗ್ರಹ ಸಾಧ್ಯವಾಗಲಿದೆ.
ಖಾನಾಪುರ ತಾಲೂಕಿನ ಬೈಲೂರ ಬಳಿ ಉಗಮಿಸುವ ಮಾರ್ಕಂಡೇಯ ನದಿಯ ವ್ಯಾಪ್ತಿಯಲ್ಲಿ ಜಲಾಶಯ ನಿರ್ಮಿಸುವ ಮೂಲಕ ಗೋಕಾಕ ಪಟ್ಟ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ.
ಇದಲ್ಲದೇ ಅಣೆಕಟ್ಟಿನ ಎತ್ತರವನ್ನು ಬಳಸಿಕೊಂಡು 30 ರಿಂದ 35 ಮೆಗಾವ್ಯಾಟ್ ಜಲ ವಿದ್ಯುತ್ ಉತ್ಪಾದನೆಯ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂದು ಯೋಜನೆಯ ಅಧ್ಯಯನ ಕೈಗೊಂಡಿರುವ ಕನ್ಸಲ್ಟನ್ಸಿ ಸಂಸ್ಥೆಯ ರಂಗನಾಥ ವಿವರಿಸಿದರು.
ಶಾಶ್ವತ ಕುಡಿಯುವ ನೀರು, ಜಲ ವಿದ್ಯುತ್ ಉತ್ಪಾದನೆ, ಅಂತರ್ಜಲ ಮಟ್ಟ ಹೆಚ್ಚಳ, ಅರಣ್ಯ ಪ್ರದೇಶ ಅಭಿವೃದ್ಧಿ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಗಟ್ಟಿ ಬಸವಣ್ಣ ಜಲಾಶಯ ಪೂರಕವಾಗಲಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಯೋಜನೆಗೆ ಅರಣ್ಯ ಇಲಾಖೆಯ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಅರಣ್ಯ ಇಲಾಖೆಯ ಅಧಿಕಾರಿ ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರು ಜಲಾಶಯ ಯೋಜನೆಯ ಅನುಷ್ಠಾನದ ಕುರಿತು ಮಾತನಾಡಿದರು.
ಶಾಸಕ ದುರ್ಯೋಧನ ಐಹೊಳೆ, ಬೆಳಗಾವಿ ಉತ್ತರ ವಲಯದ ಮುಖ್ಯ ಎಂಜಿನಿಯರ್ ಎ.ಡಿ.ಕಣಗಿಲ್, ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಉಪ ವಿಭಾಗಾಧಿಕಾರಿಗಳಾದ ಅಶೋಕ ತೇಲಿ ಸೇರಿದಂತೆ ಅರಣ್ಯ, ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.