ಮೂಡಲಗಿ : ಗ್ರಾಹಕರಿಗೆ ಅತ್ಯುತ್ತಮ ಸಾಲ ಮತ್ತು ಹೂಡಿಕೆಯ ಅವಕಾಶಗಳನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಜನರು ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗುವ ಮೂಲತತ್ವದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ, ಇದರ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ 1.04 ಕೋಟಿ ಲಾಭಗಳಿಸಿ ಸಹಕಾರಿಯು ಪ್ರಗತಿಪಥದಲ್ಲಿ ಸಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣದಲ್ಲಿ ಏ-09 ರಂದು ಸಹಕಾರಿಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದÀ ಈರಣ್ಣ ಕಡಾಡಿ ಅವರು ಸಹಕಾರಿಯು ರೂ 13.40 ಲಕ್ಷ ಶೇರು ಬಂಡವಾಳ ಹೊಂದಿದ್ದು, 2021-22ರ ಆರ್ಥಿಕ ವರ್ಷದಲ್ಲಿ 28.22 ಕೋಟಿ ಠೇವಣಿ ಸಂಗ್ರಹಿಸಿ, ರೂ 29.62 ಕೋಟಿ ಸಾಲ ವಿತರಿಸಿದೆ. 139.47 ಕೋಟಿ ರೂ ವಹಿವಾಟು ನಡೆಸುವ ಮೂಲಕ ರೂ 32.31 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದರು.
ರೂ 3.95 ಕೋಟಿ ನಿಧಿಗಳನ್ನು ಹೊಂದಿದ್ದು, ಕಳೆದ 3 ವರ್ಷಗಳಿಂದ ಶೇ 20 ರಷ್ಟು ಶೇರು ಲಾಭಾಂಶವನ್ನು ಸಹಕಾರಿಯ ಗ್ರಾಹಕರಿಗೆ ಹಂಚಲಾಗಿದೆ ಎಂದರಲ್ಲದೆ ವ್ಯಾಪಾರಸ್ಥರಿಗೆ ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಶೇ 12 ರ ಬಡ್ಡಿ ದರದಂತೆ ಸಾಮಾನ್ಯರಿಗೂ ಕೈಗೆಟಕುವ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದ್ದು, ಗ್ರಾಮೀಣ ಜನರ ಆರ್ಥಿಕ ಮಟ್ಟ ಸುಧಾರಣೆಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಅಲ್ಲದೇ ಪ್ರತಿ ವರ್ಷ ಅಡಿಟ್‍ದಲ್ಲಿ ‘ಅ’ ಶ್ರೇಯಾಂಕ ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು.
ಸಹಕಾರಿಯ ಪ್ರಗತಿಗೆ ಕಾರಣರಾದ ಗ್ರಾಹಕರ, ಸಹಕಾರಿಯ ಮೇಲೆ ನಂಬಿಕೆಯಿಟ್ಟು ಠೇವಣಿಗಳನ್ನು ನೀಡಿದ ಸದಸ್ಯರ, ದಕ್ಷತೆಯಿಂದ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಆಡಳಿತ ಮಂಡಳಿಯ ನಿರ್ದೇಶಕರು, ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು, ಕಾನೂನಿನ ಸಲಹೆಗಾರರು ಹಾಗೂ ಲೆಕ್ಕ ಪರಿಶೋಧಕರು ಮತ್ತು ಸಹಕಾರಿಯ ಹಿತೈಶಿಗಳ ಪ್ರೋತ್ಸಾಹವನ್ನು ಸಂಸದ ಈರಣ್ಣ ಕಡಾಡಿ ಅವರು ಸ್ಮರಿಸಿದರು.
ಸಹಕಾರಿಯ ಹಾಗೂ ಬಿಡಿಸಿಸಿ ನಿರ್ದೇಶಕರಾದ ಸತೀಶ ಕಡಾಡಿ, ಶ್ರೀಶೈಲ ತುಪ್ಪದ, ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಗೊಂಡಪ್ಪ ವ್ಯಾಪಾರಿ, ಮಲ್ಲಿಕಾರ್ಜುನ ಹುಲೇನ್ನವರ, ಮಾರುತಿ ಮಕ್ಕಳಗೇರಿ, ಸಿದ್ದಪ್ಪ ಹೆಬ್ಬಾಳ, ಸೋಮಲಿಂಗ ಹಡಗಿನಾಳ, ಬೆಟಗೇರಿ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಈರಪ್ಪ ದೇಯನ್ನವರ, ಉಪಾಧಕ್ಷ ಮಾಯಪ್ಪ ಬಾಣಸಿ, ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ, ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆನ್ನವರ ಉಪಸ್ಥಿತರಿದ್ದರು.