ಮೂಡಲಗಿ: ಪ್ರಸ್ತುತ ದಿನಮಾನಗಳಲ್ಲಿ ಮಣ್ಣು ಮತ್ತು ನೀರುನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ತಾಲೂಕಿನ ಪಟಗುಂದಿ ಗ್ರಾಮದಲ್ಲಿ ಸತೀಶ ಶುಗರ್ಸ ಸಕ್ಕರೆ ಕಾರ್ಖಾನೆ ಹಾಗೂ ಪಟಗುಂದಿಯ ಶ್ರೀ 1008 ಸುಪಾಶ್ರ್ವನಾಥ ದಿಗಂಬರ ಜೈನ್ ಮಂದಿರ ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ಅಭಿನಂದನಾ ಹಾಗೂ ಕಬ್ಬಿನ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ಓಝೋನ್ ಪದರು ಹಾಳಾಗಿದ್ದು, ಮಳೆ, ಬೆಳೆ ಮೇಲೆ ಪರಿಣಾಮ ಬೀರುತ್ತಿದ್ದು, ಮನುಷ್ಯನ ವಯಸ್ಸಿನ ಹಾಗೆ ಭೂಮಿಗೂ ವಯಸ್ಸು ಇದೆ. ಹಾಗಾಗಿ ಪರಿಸರ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದರು.
ಕೃಷಿ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕಡಿಮೆ ಖರ್ಚಿನಲ್ಲಿ ಭೂತಾಯಿಯ ಮಡಿಲಿನಿಂದ ಉತ್ತಮ ಇಳುವರಿ ತೆಗೆಯಲು ರೈತರು ಮುಂದಾಗಬೇಕು. ರೈತರು ಗುಡಿ ಗುಂಡಾರಗಳನ್ನು ಸುತ್ತೋ ಬದಲು ತಮ್ಮ ಮಕಳ್ಳಿಗೆ ಗುಣಮಟ್ಟ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕೆಂದರು.
ಬೆಳಗಾವಿಯ ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ. ಆರ್ ಬಿ ಖಂಡಗಾವಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಬೆಳೆಯಲಾಗುವ ಪ್ರಮುಖ ಬೆಳೆಗಳಲ್ಲಿ ಕಬ್ಬು ಒಂದು. ನಮ್ಮ ಜಿಲ್ಲೆಯಲ್ಲಿ ರೈತರು ಕಬ್ಬು ಬೆಳೆಯನ್ನೇ ಅವಲಂಬಿಸಿದ್ದಾರೆ. ಆದರೆ ಕಬ್ಬಿನ ಉತ್ತಮ ಇಳುವರಿ ಪಡೆಯಬೇಕಾದರೆ ಕಬ್ಬು ಬೆಳೆಯಲು ಅನುರಿಸವ ವಿಧಾನದ ಮೇಲೆ ನಿಂತಿದೆ. ಅಸಮರ್ಪಕ ಪೋಷಕಾಂಶಗಳ ಬಳಕೆ ಹಾಗೂ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಇಳುವರಿಯಲ್ಲಿ ಕುಸಿಯುತ್ತಾ ಬಂದಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಮ್ ಎಮ್ ನದಾಫ್ ಹಾಗೂ ಸದಲಗಾದ ಪ್ರಗತಿಪರ ರೈತ ರುದ್ರಕುಮಾರ ಹಾಲಪ್ಪನವರ ಮಾತನಾಡಿ, ಕಬ್ಬು ಒಂದು ನೀರಾವರಿ ಬೆಳೆಯಾಗಿದ್ದು, ಕಾಲಕಾಲಕ್ಕೆ ಅಗತ್ಯ ಪ್ರಮಾಣದ ನೀರು ರಾಸಾಯನಿಕ ಗೊಬ್ಬರ ನೀಡುಬೇಕು. ಆದರೆ ರೈತರು ಅತಿ ಹೆಚ್ಚು ಇಳುವರಿ ತೆಗೆಯುವ ಉದ್ದೇಶದಿಂದ ಮಿತಿ ಮೀರಿದ ಪ್ರಮಾಣದಲ್ಲಿ ಭೂಮಿಗೆ ರಾಸಾಯನಿಕಗಳನ್ನು ಹಾಕುತ್ತಾರೆ. ಬೆಳೆ ಕಟಾವು ಮಾಡಿದ ಬಳಿಕ ಭೂಮಿಯ ಫಲವತ್ತತೆ ಹೆಚ್ಚಿಸುವತ್ತ ರೈತರು ಗಮನಹರಿಸುವುದಿಲ್ಲ. ಬೆಳೆ ಕಟಾವು ಮಾಡಿದ ನಂತರ, ಜಮೀನಿಗೆ ಕೊಟ್ಟಿಗೆ ಕೊಬ್ಬರ, ಕುರಿ-ಕೋಳಿ ಗೊಬ್ಬರ ನೀಡುವುದು ಬಹುಮುಖ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀ 1008 ಸುಪಾಶ್ರ್ವನಾಥ ದಿಗಂಬರ ಜೈನ್ ಮಂದಿರ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಪಿ.ಡಿ.ಹುಕ್ಕೇರಿ, ಮುಖಂಡರಾದ ಎಚ್,ವಾಯ್ ನಾಯ್ಕ್, ಪಾಂಡು ಮನ್ನಿಕೇರಿ, ಅಜೀತ ಹೊಸಮನಿ ಹಾಗೂ ರೈತರು ಭಾಗವಹಿಸಿದರು. ಮಿಥನ ಶಾಸ್ತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು, ಸಂದೀಪ್ ಶೆಟ್ಟಿ ವಂದಿಸಿದರು.
