ಮೂಡಲಗಿ; ಇಡೀ ರಾಜಕೀಯ ಬದಲಾವಣೆಗಾಗಿ ಆಮ್ ಆದ್ಮಿ ಪಕ್ಷ ದೆಹಲಿಯಿಂದ ಕರ್ನಾಟಕ್ಕೆ ಬಂದಿದ್ದು, ಅದು ಬೆಂಗಳೂರಿಗೆ ಮಾತ್ರ ಸಿಮೀತವಾಗದೇ ಇಡೀ ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿ ಪಕ್ಷ ಸಂಘಟನೆಯಾಗುವ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ರಾಜಕೀಯವನ್ನು ಬದಲಾವಣೆ ಮಾಡುವ ಶಕ್ತಿ ಆಮ್ ಆದ್ಮಿ ಪಕ್ಷಕ್ಕಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಾಸ್ಕರಾವ ಹೇಳಿದರು.
ಮೂಡಲಗಿ ಸಮೀಪದ ಸಮರ್ಥ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಸಂಜೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗಾಗಿ ಆಮಂತ್ರಣ ನೀಡಲು ಪಕ್ಷದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ನುಡಿಗಾಗಿ, ಉತ್ತರ ಕರ್ನಾಟಕ ಅಭಿವೃದ್ಧಿ, ಮಾಹಿತಿ ಹಕ್ಕು ಹಾಗೂ ಸಂಕಷ್ಟದಲ್ಲಿ ಇರುವ ಜನರಿಗೊಸ್ಕರ ಹಗಲಿರುಳು ಹೋರಾಟ ಮಾಡುತ್ತಿರುವ ಭೀಮಪ್ಪ ಗಡಾದವರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರೇ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತೊಲಗಿಸುವ ಮೂಲಕ ಉತ್ತಮ ರಾಜಕೀಯವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾತನಾಡಿ, ಸರ್ಕಾರದ ಭ್ರಷ್ಟಾಚಾರ ಆಡಳಿತ ಹಾಗೂ ಕುಟುಂಬ ರಾಜಕೀಯವನ್ನು ರಾಜ್ಯದಿಂದ ತೊಲಗಿಸಲು ಮತದಾರರು ಒಳ್ಳೆಯ ಪಕ್ಷವನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ರಾಜ್ಯದಲ್ಲಿ ಅಭಿವೃದ್ಧಿ ಸಾಧ್ಯ. ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಗೋಕಾಕ ಹಾಗೂ ಅರಭಾವಿ ಮತ್ರಕ್ಷೇತ್ರದ ಜನರ ಸಭೆ ನಡೆಸಿ, ಸಭೆಯಲ್ಲಿ ಚರ್ಚಿಸಿದ ನಂತರ ನಿರ್ಧರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜು ಟೋಪನ್ನವರ, ಉಪೇಂದ್ರ ಗಾಂವಕರ, ಪ್ರಕಾಶ ಬಾಗೋಜಿ, ವಿಜಯ ಶಾಸ್ತ್ರಿಮಠ, ಸ್ಥಳೀಯ ಮುಖಂಡರಾದ ಈರಣ್ಣ ಕೊಣ್ಣುರ, ಶ್ರೀಕಾಂತ ಕೊರಶೆಟ್ಟಿ, ರಾಚಪ್ಪ ಅಂಗಡಿ, ಮಲ್ಲಪ್ಪ ಮದಗುಣಿಕಿ, ಸಂಗಪ್ಪ ಕಳ್ಳಿಗುದ್ದಿ ಹಾಗೂ ಗೋಕಾಕ-ಮೂಡಲಗಿಯ ಸಾರ್ವಜನಿಕರು ಉಪಸ್ಥಿತರಿದ್ದರು.