ಮೂಡಲಗಿ: ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸಕ್ಕರೆ ವಿಜ್ಞಾನ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಥಮ ಬಿ.ಎಸ್‍ಸಿ ಸಕ್ಕರೆ ವಿಜ್ಞಾನ ಓದುವುದಕ್ಕೆ ವಿದ್ಯಾರ್ಥಿಗಳಿಗೆ ಪ್ರವೇಶ ಆರಂಭವಾಗಿದೆ. ಪಿ.ಯು.ಸಿ ವಿಜ್ಞಾನ ಪರೀಕ್ಷೆ ಪಾಸಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರವೇಶ ಪಡೆದು ಇದರ ಉಪಯೋಗ ಪಡೆದುಕೊಳ್ಳಬಹುದು ಎಂದು ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ. ಬಿ.ಆರ್ ಖಾಂಡಗಾವೆ ಹೇಳಿದರು.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕರ್ನಾಟಕದಲ್ಲಿ 70 ಸಕ್ಕರೆ ಕಾರಖಾನೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ 600ಕ್ಕೂ ಹೆಚ್ಚು ಸಕ್ಕರೆ ಕಾರಖಾನೆಗಳಿವೆ. ರಾಜ್ಯದಲ್ಲಿ 100 ಕ್ಕೂ ಹೆಚ್ಚು ಇಥೇನಾಲ್ ಉತ್ಪಾದನೆಯ ಹೊಸ ಡಿಸ್ಟಿಲರಿ ಕಾರಖಾನೆಗಳು ಆರಂಭವಾಗಲಿವೆ. ಇದರಿಂದಾಗಿ ಸಕ್ಕರೆ ತಂತ್ರಜ್ಞಾನದಲ್ಲಿ ಪದವಿ ಪಡೆದ ಯುವಕರಿಗೆ ಸಾಕಷ್ಟು ಉದ್ಯೋಗ ದೊರಕಲಿದೆ ಎಂದು ಡಾ. ಖಾಂಡಗಾವೆ ತಿಳಿಸಿದ್ದಾರೆ.
ಸಕ್ಕರೆ ತಂತ್ರಜ್ಞಾನ ಮಹಾವಿದ್ಯಾಲಯ ಕಳೆದ 5 ವರ್ಷಗಳಿಂದ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸುತ್ತಿದೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಪೂರ್ಣ ಸಹಕಾರ ನೀಡುತ್ತಿದೆ. ಪ್ರತಿ ವರ್ಷ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಸ್ನಾತ್ತಕೋತ್ತರ ವಿದ್ಯಾಭ್ಯಾಸಕ್ಕೂ ಅವಕಾಶ ಇದೆ. ಉತ್ತಮ ವಿದ್ಯಾರ್ಥಿನಿಲಯ, ಗ್ರಂಥಾಲಯ, ಪರಿಣಿತ ಬೋಧಕರು ಇದ್ದಾರೆ. ವಿದ್ಯಾರ್ಥಿನಿಯರಿಗೂ ಪ್ರವೇಶಕ್ಕೆ ಅವಕಾಶವಿದೆ ಎಂದು ಅವರು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ 0831-2472464-9448157757-9611518789 ಸಂಪರ್ಕಿಸಲು ಅವರು ತಿಳಿಸಿದ್ದಾರೆ.