ಮೂಡಲಗಿ: ಸಾಂಪ್ರದಾಯಿಕ ಕೈಗಾರಿಕೆಗಳ ಉನ್ನತೀಕರಣ ಮತ್ತು ಪುನಶ್ಚೇತನ ನಿಧಿ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 365 ಕ್ಲಸ್ಟರ್‍ಗಳನ್ನು ಅನುಮೋದಿಸಲಾಗಿದೆ ಮತ್ತು ಸುಮಾರು ರೂ.2,09,741 ಕುಶಲಕರ್ಮಿ ಫಲಾನುಭವಿಗಳಿಗೆ 1,025 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಜು-18 ರಂದು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ ನಿಧಿ ಯೋಜನೆ ಅನುಷ್ಠಾನದ ಕುರಿತು ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಾಂಪ್ರದಾಯಿಕ ಕೈಗಾರಿಕೆಗಳು ಮತ್ತು ಅವುಗಳಲ್ಲಿ ಕೆಲಸ ಮಾಡುವ ಎಲ್ಲ ಕುಶಲಕರ್ಮಿಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕೃಷಿ ಆಧಾರಿತವಾದ ಖಾದಿ ಉದ್ಯಮ, ಬಿದಿರು ಉದ್ಯಮ, ಜೇನು ಉದ್ಯಮ, ತೆಂಗಿನಕಾಯಿ ರಫ್ತು ವಲಯ ಇತ್ಯಾದಿಗಳಿಂದ ಈ ಯೋಜನೆಯಡಿ ಒಳಗೊಂಡಿರುವ ಸಾಂಪ್ರದಾಯಿಕ ಕೈಗಾರಿಕೆಗಳಾಗಿವೆ ಎಂದರು.
ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ 2021-22ನೇ ಸಾಲಿನಲ್ಲಿ 7,17,020 ಫಲಾನುಭವಿಗಳಿಗೆ 56,176 ಕೋಟಿ ರೂ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಿಂದ ಖಾದಿ ಮತ್ತು ಗ್ರಾಮೀಣ ಕೈಗಾರಿಕೋದ್ಯಮ ಮತ್ತು ತೆಂಗು ನಾರು ಅಭಿವೃದ್ಧಿಗೆ 2021-22ನೇ ಸಾಲಿನಲ್ಲಿ 6.10 ಕೋಟಿ ರೂ ಅನುದಾನ ಬಳಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದರು ಮಾಹಿತಿ ಹಂಚಿಕೊಂಡರು.
