ಮೂಡಲಗಿ, ಕುಲಗೋಡ, ಖಾನಟ್ಟಿ ಹಾಗೂ ಬೆಟಗೇರಿಗೆ ಹೊಸ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳು ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಕಾಲೇಜುಗಳ ಸಂಖ್ಯೆ 9ಕ್ಕೆ ಏರಿಕೆ
ಮೂಡಲಗಿ : ಅರಭಾವಿ ವಿಧಾನಸಭಾ ಕ್ಷೇತ್ರಕ್ಕೆ 2022-23 ನೇ ಸಾಲಿನಲ್ಲಿ 4 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮಂಜೂರು ಆಗಿವೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಮೂಡಲಗಿ ತಾಲೂಕಿನ ಮೂಡಲಗಿ, ಕುಲಗೋಡ, ಖಾನಟ್ಟಿ ಮತ್ತು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ಹೊಸ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿಸಲಾಗಿದೆ. ಇದರಿಂದ ಮೂಡಲಗಿ ವಲಯದಲ್ಲಿ ಕಾಲೇಜುಗಳ ಸಂಖ್ಯೆ 9ಕ್ಕೇರಿದೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಪದವಿ ಪೂರ್ವ ಶಿಕ್ಷಣ ಸಲುವಾಗಿ ಆಯಾ ಗ್ರಾಮಗಳ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದರಿಂದ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಒಟ್ಟು 8 ಹೊಸ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳನ್ನು ಮಂಜೂರು ಮಾಡುವಂತೆ ಸಚಿವ ಬಿ.ಸಿ. ನಾಗೇಶ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ನಮ್ಮ ಮನವಿಯ ಮೇರೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಬಿ.ಸಿ. ನಾಗೇಶ ಅವರು ಮೂಡಲಗಿ ಶೈಕ್ಷಣಿಕ ವಲಯಕ್ಕೆ ಸಧ್ಯ 4 ಹೊಸ ಕಾಲೇಜುಗಳನ್ನು ಆರಂಭಿಸಲಿಕ್ಕೆ ಅನುಮತಿ ನೀಡಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಇದರ ಜೊತೆಗೆ ಇನ್ನೂ 4 ಕಾಲೇಜುಗಳನ್ನು ಆರಂಭಿಸಲಿಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಮೆಳವಂಕಿ, ದುರದುಂಡಿ, ಅವರಾದಿ ಮತ್ತು ಪಾಮಲದಿನ್ನಿ ಗ್ರಾಮಗಳಿಗೆ ಹೊಸ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳನ್ನು ಆರಂಭಿಸುವಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರನ್ನು ಕೋರಲಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ನಮ್ಮ ಕ್ಷೇತ್ರಕ್ಕೆ ಹೊಸ ಕಾಲೇಜುಗಳನ್ನು ಮಂಜೂರು ಮಾಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಬಿ.ಸಿ. ನಾಗೇಶ ಅವರಿಗೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮೂಡಲಗಿ, ಕುಲಗೋಡ, ಖಾನಟ್ಟಿ ಮತ್ತು ಬೆಟಗೇರಿ ಗ್ರಾಮಗಳ ಮುಖಂಡರು ಮತ್ತು ಶಿಕ್ಷಣ ಪ್ರೇಮಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.